ನೇಪಾಳದಲ್ಲಿ ಪ್ರಬಲ ಭೂಕಂಪ ಕನಿಷ್ಠ ೧೨೯ ಮಂದಿ ಸಾವು
ಕಾಠ್ಮಂಡು: ಭಾರತದ ನೆರೆ ರಾಷ್ಟ್ರವಾದ ನೇಪಾಳದಲ್ಲಿ ನಿನ್ನೆ ತಡರಾತ್ರಿ ಪ್ರಬಲ ಭೂ ಕಂಪವಾಗಿದ್ದು, ಅದರಲ್ಲಿ ಕನಿಷ್ಠ ೧೨೯ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ನೂರಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ ೬.೪ ತೀವ್ರತೆಯ ಭೂಕಂಪ ದಾಖಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ನೇಪಾಳದ ಜನಸಾಂದ್ರತೆ ಕಡಿಮೆ ಇರುವ ರಿಮೋಟ್ ಪ್ರದೇಶದಲ್ಲಿ ನಿನ್ನೆ ರಾತ್ರಿ ೧೧.೪೭ರ ವೇಳೆಗೆ ಈ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಹಲವು ಮನೆಗಳು ಹಾಗೂ ಕಟ್ಟಡಗಳು ಕುಸಿದು ಬಿದ್ದಿವೆ. ಹಲವು ಕಟ್ಟಡಗಳಿಗೆ ಹಾನಿ ಉಂಟಾಗಿದೆ. ತಡರಾತ್ರಿ ಭೂಕಂಪ ಸಂಭವಿಸಿರುವುದರಿಂದಾಗಿ ಕತ್ತಲಲ್ಲಿ ಅವಶೇಷಗಳನ್ನು ಹೊರತೆಗೆಯಲಾಗಿದೆ. ಕುಸಿದು ಬಿದ್ದ ಮನೆಗಳು ಮತ್ತು ಕಟ್ಟಡಗಳ ಅವಶೇಷಗಳ ಅಡಿ ಭಾಗದಲ್ಲಿ ಸಿಲುಕಿರುವವರನ್ನು ಈರಕ್ಷಿಸುವ ರಕ್ಷಾ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ. ನೇಪಾಳದ ರುಕುಮಾ ವೆಸ್ಟ್ನಲ್ಲಿ ಭೂಕಂಪದಿಂದ ೩೬ ಮಂದಿ ಬಲಿಯಾಗಿದ್ದಾರೆ. ಇನ್ನು ಜಜಿರೋಟ್ ಎಂಬಲ್ಲಿ ೩೪ ಮಂದಿ ಸಾವನ್ನಪ್ಪಿರುವುದಾಗಿ ಅಲ್ಲಿನ ಮುಖ್ಯ ಜಿಲ್ಲಾಧಿಕಾರಿ ಹರಿಪ್ರಸಾದ್ ಪಂತ್ ತಿಳಿಸಿದ್ದಾರೆ. ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಪ್ರಭಾವ, ಅಲ್ಲಿಂದ ೫೦೦ ಕಿಲೋ ಮೀಟರ್ ದೂರ ಇರುವ ಭಾರತದ ರಾಜಧಾನಿ ನವದೆಹಲಿಯಲ್ಲೂ ಬೀರಿದೆ. ಇದರಿಂದ ದೆಹಲಿ -ಎನ್ಸಿಆರ್ ಸೇರಿ ಉತ್ತರ ಭಾರತದ ಹಲವೆಡೆಗಳಲ್ಲೂ ಭೂಕಂಪದ ಅನುಭವ ಉಂಟಾಗಿದ್ದು, ಆ ವೇಳೆ ನಿದ್ದೆಯಲ್ಲಿದ್ದ ಜನರು ಗಾಬರಿಯಿಂದ ಎದ್ದು ಮನೆಯಿಂದ ಹೊರ ಓಡಿದ್ದಾರೆ.
ಅಪಘಾತದಿಂದ ಉಂಟಾದ ಭೀಕರ ಪ್ರಾಣಹಾನಿ ಮತ್ತು ತೀವ್ರ ಮೂಲ ಸೌಕರ್ಯ ಹಾನಿಯ ಬಗ್ಗೆ ಭಾರತ ಪ್ರಧಾನಿ ನರೇಂದ್ರಮೋದಿ ಮತ್ತು ನೇಪಾಳ ಪ್ರಧಾನಮಂತ್ರಿ ಪುಷ್ಪಕಮಾಲ್ ದಹಲ್ ತೀವ್ರ ಸಂತಾಪ ಸೂಚಿಸಿದ್ದಾರೆ.
೨೦೧೫ರಲ್ಲಿ ನೇಪಾಳದಲ್ಲಿ ೭.೮ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ೯೦೦೦ ಮಂದಿಯನ್ನು ಅದು ಬಲಿ ತೆಗೆದುಕೊಂಡಿತ್ತು. ೨೨,೦೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಲ್ಲದೆ ೫ ಲಕ್ಷಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, ಸುಮಾರು ೮೦೦೦ ಶಾಲೆಗಳೂ ಹಾನಿಗೊಳಗಾಗಿತ್ತು.