ಸನಾತನ ಧರ್ಮದ ವಿರುದ್ಧ ಹೇಳಿಕೆಪ್ರಕರಣ ದಾಖಲಿಸದ ತಮಿಳುನಾಡು ಪೊಲೀಸರ ನಿಲುವಿಗೆ ಹೈಕೋರ್ಟ್ ಚಾಟಿ
ಚೆನ್ನೈ : ಸನಾತನ ಧರ್ಮವು ಡೆಂಗ್ಯೂ, ಮಲೇರಿಯ ಇದ್ದಂತೆ. ಆದ್ದರಿಂದ ಸನಾತನ ಧರ್ಮವನ್ನು ಕೇವಲ ವಿರೋಧ ಮಾಡುವುದಷ್ಟೇ ಮಾತ್ರವಲ್ಲ, ಅದನ್ನು ನಿರ್ಮೂಲನೆ ಮಾಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ರ ಪುತ್ರ ಹಾಗೂ ಸಚಿವರಾಗಿರುವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಮತೀಯ ಸಾಮರಸ್ಯಕ್ಕೆ ಧಕ್ಕೆಯುಂಟುಮಾಡುವ ರೀತಿಯ ದ್ದಾಗಿದೆಯೆಂದೂ, ಆದ್ದರಿಂದ ಆ ಬಗ್ಗೆ ಪೊಲೀಸರು ಇನ್ನೂ ಯಾಕೆ ಪ್ರಕರಣ ದಾಖಲಿಸಿಕೊಂಡಿಲ್ಲವೆಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೊಲೀಸರನ್ನು ಪ್ರಶ್ನಿಸಿದೆ.
ಚೆನ್ನೈಯಲ್ಲಿ ಸೆ. ೨ರಂದು ನಡೆದ ಲೇಖಕರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ಸಚಿವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ಜನರನ್ನು ಜಾತಿ ಮತ್ತು ಲಿಂಗ ತಾರತಮ್ಯ ಮಾಡಿ ವಿಭಜಿಸುತ್ತಿದೆ. ಮಾತ್ರವಲ್ಲ ಆ ಧರ್ಮ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆಯೆಂದೂ ಕಿಡಿಕಾರಿದ್ದರು. ಉದಯನಿಧಿ ಸ್ಟಾಲಿನ್ರ ಇಂತಹ ಹೇಳಿಕೆ ಮತೀಯ ಸಾಮರಸ್ಯವನ್ನು ಕೆದಕುವ ರೀತಿಯದ್ದಾಗಿದೆಯೆಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅದರ ವಿರುದ್ಧ ದೂರು ನೀಡಿದ್ದರೂ, ಆ ಬಗ್ಗೆ ಪೊಲೀಸರು ಯಾಕೆ ಪ್ರಕರಣ ದಾಖಲಿಸಿಕೊಂಡಿಲ್ಲ ವೆಂದು ನ್ಯಾಯಾಲಯ ಪ್ರಶ್ನಿಸಿ ಪೊಲೀಸರ ಮೇಲೆ ಚಾಟಿ ಬೀಸಿದೆ. ಅಧಿಕಾರದಲ್ಲಿರುವವರು ಅದರ ಘನತೆ ಸಂರಕ್ಷಿಸಬೇಕಾಗಿದೆ. ಆದ್ದರಿಂದ ಅಂತಹ ಸ್ಥಾನದಲ್ಲಿರುವ ಯಾರೂ ಇಂತಹ ಹೇಳಿಕೆ ನೀಡಬಾರದೆಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.