ಗೃಹಿಣಿಯನ್ನು ಅಪಹರಿಸಿ ಕೊಲೆ: ಓರ್ವ ಆರೋಪಿ ಬಂಧನ; ಇನ್ನೋರ್ವನಿಗಾಗಿ ಶೋಧ
ಕಲ್ಲಿಕೋಟೆ: ಗೃಹಿಣಿಯನ್ನು ಅಪಹರಿಸಿಕೊಂಡೊಯ್ದು ಕೊಲೆಗೈದು ಮೃತದೇಹವನ್ನು ಕಂದಕಕ್ಕೆ ಎಸೆದ ಘಟನೆ ಕಲ್ಲಿಕೋಟೆ ಬಳಿ ನಡೆದಿದೆ. ಕಲ್ಲಿಕೋಟೆ ಕುಟ್ಟಿ ಕಾಟೂರ್ ವಡಕ್ಕೆ ವಿರಪ್ಪೊಯಿಲ್ ವೀಟಿಲ್ ಸೈನಬ (೫೨) ಎಂಬಾಕೆ ಕೊಲೆಗೈಯ್ಯಲ್ಪಟ್ಟ ಮಹಿಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾದ ಮೇಲಪ್ಪುರಂ ತಾನೂರ್ ಕುನ್ನುಂಪುರ ಸಮದ್ (೫೨) ಎಂಬಾತನನ್ನು ಪೊಲೀಸರು ಬಂಧಿಸಿ ದ್ದಾರೆ. ಇನ್ನೋರ್ವ ಆರೋಪಿಯಾದ ಗುಡಲ್ಲೂರು ನಿವಾಸಿ ಸುಲೈಮಾನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ತಮಿಳುನಾಡಿನಲ್ಲಿ ಶೋಧ ನಡೆಯುತ್ತಿದೆ.
ಸೈನಬ ಈ ತಿಂಗಳ ೭ರಿಂದ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಪತಿ ಜೇಮ್ಸ್ ಯಾನೆ ಮುಹಮ್ಮದಲಿ ೮ರಂದು ಕಸಬ ಪೊಲೀಸರಿಗೆ ದೂರು ನೀಡಿದ್ದರು. ಸೆಕ್ಯೂರಿಟಿ ನೌಕರನಾದ ಪತಿ ಮನೆಗೆ ಬಂದಾಗ ಸೈನಬ ನಾಪತ್ತೆಯಾಗಿದ್ದಳೆನ್ನ ಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ನಡೆಸಿದ ತನಿಖೆ ವೇಳೆ ಸೈನಬರ ಫೋನ್‌ಗೆ ಸಮದ್ ಕರೆ ಮಾಡಿರುವುದನ್ನು ಸೈಬರ್ ಪೊಲೀಸರು ಪತ್ತೆಹಚ್ಚಿದರು. ಇದರಂತೆ ಆರೋಪಿ ಸಮದ್‌ನನ್ನು ೧೨ರಂದು ಪೊಲೀಸರು ಮಲಪ್ಪುರಂನಿಂದ ಕಸ್ಟಡಿಗೆ ತೆಗೆದು ತನಿಖೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಹಲವು ವರ್ಷಗಳಿಂದ ಪರಿಚಯದಲ್ಲಿದ್ದ ಸೈನಬರಿಂದ ಹಣ ಹಾಗೂ ಚಿನ್ನಾಭರಣ ಲಪಟಾಯಿಸಲು ಈ ಕೊಲೆ ನಡೆಸಿರುವುದಾಗಿ ಆರೋಪಿ ತಿಳಿಸಿದ್ದಾನೆ. ಆರೋಪಿಯನ್ನು ಕರೆದೊಯ್ದು ನಡೆಸಿದ ತನಿಖೆ ವೇಳೆ ನಾಡುಕಾಣಿ ಚೂರ ಎಂಬಲ್ಲಿನ ಕಂದಕದಲ್ಲಿ ಸೈನಬರ ಮೃತದೇಹ ಪತ್ತೆಯಾಗಿತ್ತು. ಆರೋಪಿ ಸಮದ್‌ಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.