ಸುದ್ಧಿ ಮಾಧ್ಯಮ ವರದಿಗಾರ್ತಿ ಜತೆ ಅನುಚಿತ ವರ್ತನೆ ಆರೋಪ: ಬಿಜೆಪಿ

ರ‍್ಯಾಲಿಯೊಂದಿಗೆ ಪೊಲೀಸ್ ಠಾಣೆಯಲ್ಲಿ ಹಾಜರಾದ ಸುರೇಶ್ ಗೋಪಿ 

ಕಲ್ಲಿಕೋಟೆ: ಸುದ್ಧಿ ಮಾಧ್ಯಮ ವರದಿಗಾರ್ತಿ ಜೊತೆ ಅನುಚಿತ ರೀತಿಯಲ್ಲಿ ವರ್ತಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ದಾಖಲಿಸಲಾದ ದೂರಿಗೆ ಸಂಬಂಧಿಸಿ   ಬಿಜೆಪಿ ನೇತಾರ, ಸಿನೆಮಾ ನಾಯಕ ನಟ ಸುರೇಶ್ ಗೋಪಿ ನಿನ್ನೆ ಬೆಳಿಗ್ಗೆ ಬಿಜೆಪಿಯ ಬೃಹತ್ ರ‍್ಯಾಲಿಯೊಂದಿಗೆ ಕಲ್ಲಿಕೋಟೆ ನಡಕಾವ್ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾರೆ.

ಈ ಪ್ರಕರಣದ ಬಗ್ಗೆ ಹೇಳಿಕೆ ದಾಖಲಿಸಲು ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಪೊಲೀಸರು ಸುರೇಶ್ ಗೋಪಿಗೆ ಸಮನ್ಸ್ ಜ್ಯಾರಿಗೊಳಿಸಿದ್ದರು. ಅದರಂತೆ ಅವರು ಠಾಣೆಯಲ್ಲಿ ನಿನ್ನೆ ಬೆಳಿಗ್ಗೆ ಹಾಜರಾದರು. ಬಳಿಕ ಪೊಲೀಸರು  ಹೇಳಿಕೆಗಳನ್ನು ದಾಖಲಿಸಿಕೊಂಡು, ಮುಂದೆ ಯಾವುದೇ ವೇಳೆ ಕರೆದಾಗ ಮತ್ತೆ ಪೊಲೀಸ್ ಠಾಣೆಯಲ್ಲಿ ಹಾಜರಾಗ ಬೇಕೆಂಬ ನಿಬಂಧನೆಯಡಿ ಅವರನ್ನು ಪೊಲೀಸರು ಬಿಡುಗಡೆಗೊಳಿಸಿದರು.

ಕಳೆದ ಅಕ್ಟೋಬರ್ ೨೭ರಂದು ಕಲ್ಲಿಕೋಟೆಯಲ್ಲಿ ಟಿವಿ ಚ್ಯಾನೆಲ್ ವರದಿಗಾರರು ಸುರೇಶ್‌ಗೋಪಿಯ ವರನ್ನು ಸುತ್ತುವರಿದು ಅವರೊಂದಿಗೆ ಮಾತನಾಡುತ್ತಿದ್ದಾಗ ಅಲ್ಲಿದ್ದ ಟಿವಿ ಚ್ಯಾನೆಲ್ ಒಂದರ ವರದಿಗಾರ್ತಿಯ ಹೆಗಲಿಗೆ ಸುರೇಶ್ ಗೋಪಿ ಕೈ ಇಟ್ಟಿದ್ದರೆಂದು ಆರೋಪಿಸಿ ಆಕೆ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಸುರೇಶ್ ಗೋಪಿ ವಿರುದ್ಧ ಐಪಿಸಿ ೩೫೪-ಎ ಕಾನೂನು ಪ್ರಕಾರ ಜಾಮೀನುರಹಿತ ಪ್ರಕರಣ ದಾಖಲಿಸಿಕೊಂಡಿದ್ದರು. ಇದು ಎರಡು ವರ್ಷ ತನಕ ಸಜೆ ಅಥವಾ ಜುಲ್ಮಾನೆ ಅಥವಾ ಅದೆರಡೂ ಲಭಿಸುವ ಸೆಕ್ಷನ್ ಆಗಿದೆ. ಈ ವಿಷಯದಲ್ಲಿ ಸುರೇಶ್ ಗೋಪಿ ಬಳಿಕ ಸ್ಪಷ್ಟೀಕರಣೆ ನೀಡಿದ್ದರು. ಮಾತ್ರವಲ್ಲ ತಪ್ಪಾಗಿದ್ದಲ್ಲಿ ಅದಕ್ಕೆ ಕ್ರಮ ಯಾಚನೆಯನ್ನೂ ನಡೆಸಿದ್ದರು.

ಸುರೇಶ್‌ಗೋಪಿಯವರ ವಿರುದ್ಧ ಇಂತಹ ದೂರು ನೀಡಿದ್ದು ಹಾಗೂ ಅದರ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು ಎಡರಂಗ ಸರಕಾರದ ರಾಜಕೀಯ ಹಗೆತನ ನೀತಿಯಾಗಿದೆ ಎಂದು ಆರೋಪಿಸಿ ಬಿಜೆಪಿ  ಇನ್ನೊಂದೆಡೆ ಸರಕಾರದ ವಿರುದ್ಧ ರಂಗಕ್ಕಿಳಿದಿದೆ.

ಕಲ್ಲಿಕೋಟೆಯಲ್ಲಿ ನಿನ್ನೆ ಬಿಜೆಪಿ ಕಾರ್ಯಕರ್ತರು ಬೃಹತ್ ರ‍್ಯಾಲಿಯೊಂದಿಗೆ ಸುರೇಶ್‌ಗೋಪಿಯನ್ನು ಪೊಲೀಸ್ ಠಾಣೆ ತನಕ  ಅನುಗಮಿಸಿದರು. ಅದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಇತರ ನೇತಾರರಾದ ಎಂ.ಟಿ. ರಮೇಶ್, ಶೋಭಾ ಸುರೇಂದ್ರನ್, ಪಿ.ಕೆ. ಕೃಷ್ಣದಾಸ್, ವಿ.ಕೆ. ಸಜೀವನ್ ಮೊದಲಾದವರು ಭಾಗವಹಿಸಿದರು. ರ‍್ಯಾಲಿಯಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರೂ ಭಾಗವಹಿಸಿದ್ದರು.

ತೃಶೂರು ಲೋಕಸಭಾ ಕ್ಷೇತ್ರ ದಿಂದ ಅಭ್ಯರ್ಥಿಯನ್ನಾಗಿ ಸುರೇಶ್ ಗೋಪಿಯವರನ್ನು ಕಣಕ್ಕಿಳಿಸಲು ಬಿಜೆಪಿ ಈಗಾಗಲೇ ತೀರ್ಮಾನಿ ಸಿದೆ. ಸುರೇಶ್ ಗೋಪಿಯವರಿಗೆ  ಆ ಕ್ಷೇತ್ರದಲ್ಲಿ ಲಭಿಸುತ್ತಿರುವ ಭಾರೀ ಜನಬೆಂಬಲದಿಂದ ದಂಗಾದ ಎಡರಂಗ ಸರಕಾರ ಅವರನ್ನು ಇಂತಹ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಅವರ ಜನ ಬೆಂಬಲವನ್ನು ಕುಗ್ಗಿಸುವಂತೆ ಮಾಡುವ ವಿಫಲಯತ್ನದಲ್ಲಿ ರಾಜಕೀಯ  ತೊಡಗಿದೆ ಎಂದೂ ಬಿಜೆಪಿ ಆರೋಪಿಸಿದೆ.

Leave a Reply

Your email address will not be published. Required fields are marked *

You cannot copy content of this page