ಪೊಲೀಸರ ಕ್ರಮ: ಕಾಸರಗೋಡಿನಲ್ಲಿ ಖಾಸಗಿ ಬಸ್ಗಳಿಂದ ಮಿಂಚಿನ ಮುಷ್ಕರ
ಕಾಸರಗೋಡು: ಪೊಲೀಸರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ಬಸ್ ನೌಕರರು ಕಾಸರಗೋಡಿನಲ್ಲಿ ಮಿಂಚಿನ ಮುಷ್ಕರ ನಡೆಸಿದರು. ಪೊಲೀಸರು ತಲುಪಿ ನೌಕರರೊಂದಿಗೆ ಮಾತನಾಡಿ ತಾತ್ಕಾಲಿಕ ಪರಿಹಾರ ಕಂಡುಕೊಂಡ ಹಿನ್ನೆಲೆಯಲ್ಲಿ ಮುಷ್ಕರ ಕೊನೆಗೊಳಿಸಲಾಯಿತು.
ಇಂದು ಬೆಳಿಗ್ಗೆ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಕಾಸರಗೋಡು ರೈಲ್ವೇ ನಿಲ್ದಾಣ ಪರಿಸರದಲ್ಲಿ ಡಿವೈಎಸ್ಪಿ ಅಸಭ್ಯವಾಗಿ ನಿಂದಿಸಿದ್ದು, ಅಲ್ಲದೆ ಬಸ್ ಸಂಚಾರಕ್ಕೆ ಪ್ರತಿಕೂಲ ಸ್ಥಿತಿ ಸೃಷ್ಟಿಸಿದರೆಂದು ಆರೋಪಿಸಿ ನೌಕರರು ಇಂದು ಬೆಳಿಗ್ಗೆ ಹೊಸ ಬಸ್ ನಿಲ್ದಾಣದಲ್ಲಿ ಮಿಂಚಿನ ಮುಷ್ಕರ ಆರಂಭಿಸಿದ್ದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂಗವಾಗಿ ನಡೆಯುವ ಮೇಲ್ಸೇತುವೆ ನಿರ್ಮಾಣದಿಂದ ಸಾರಿಗೆ ಅಡಚಣೆ ನಿತ್ಯ ಉಂಟಾಗುತ್ತಿದೆ ಎಂದೂ, ಇದರ ಹೊಣೆಗಾರಿಕೆಯನ್ನು ಬಸ್ ನೌಕರರ ಮೇಲೆ ಹೊರಿಸುವ ಕ್ರಮವನ್ನು ಅಂಗೀಕರಿಸಲು ಸಾಧ್ಯವಿಲ್ಲವೆಂದು ನೌಕರರು ತಿಳಿಸಿದ್ದಾರೆ. ಸಮಯ ಕ್ರಮವನ್ನು ಪಾಲಿಸಲು ಸಾಧ್ಯವಾಗದಿರುವುದು ತಮ್ಮ ತಪ್ಪಲ್ಲವೆಂದೂ ನೌಕರರು ತಿಳಿಸಿದ್ದಾರೆ. ವಿಷಯ ತಿಳಿದು ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ರ ನೇತೃತ್ವದಲ್ಲಿ ಪೊಲೀಸರು ತಲುಪಿ ನೌಕರರೊಂದಿಗೆ ಮಾತನಾಡಿದ ಬಳಿಕ ಮುಷ್ಕರವನ್ನು ತಾತ್ಕಾಲಿಕವಾಗಿ ಕೊನೆಗೊಳಿಸಲಾಯಿತು.