ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ: ನಾಲ್ವರು ಡಿವೈಎಫ್‌ಐ ಕಾರ್ಯಕರ್ತರ ಸೆರೆ, ನ್ಯಾಯಾಂಗ ಬಂಧನ

ಪಳಯಂಗಾಡಿ: ನವಕೇರಳ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರುಗಳು ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಕಪ್ಪು ಪತಾಕೆ ಬೀಸಿ ಪ್ರತಿಭಟನೆ ನಡೆಸಿದ ಯೂತ್ ಕಾಂಗ್ರೆಸ್ ಮತ್ತು ಕೆಎಸ್‌ಯು ಸೇರಿದ ಏಳು ಮಂದಿ ಕಾರ್ಯಕರ್ತರ ಮೇಲೆ ಕಳೆದ ಸೋಮವಾರದಂದು ಸಂಜೆ ಪಳಯಂಗಾಡಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಫ್‌ಐಯ ನಾಲ್ವರು ಕಾರ್ಯಕರ್ತರನ್ನು ಪಳಯಂಗಾಡಿ ಪೊಲೀಸರು ಬಂಧಿಸಿದ್ದರು. ಇವರು ನಿನ್ನೆ ಪೊಲೀಸ್ ಠಾಣೆಯಲ್ಲಿ ನೇರವಾಗಿ ಹಾಜರಾಗಿದ್ದಾರೆ. ಡಿವೈಎಫ್‌ಐಯ ಮಾಡಾಯಿ ಬ್ಲೋಕ್ ಜತೆ ಕಾರ್ಯದರ್ಶಿ ಪಿ. ಜಿತಿನ್ (೨೯), ಚೆರುದಳಂ ವಲಯ ಅಧ್ಯಕ್ಷ ಕೆ. ರಮೀಸ್ (೨೪), ಚೆರುದಳಂ ಸೌತ್ ವಲಯ ಅಧ್ಯಕ್ಷ ಅಮಲ್ ಬಾಬು (೨೪) ಮತ್ತು ಬ್ಲೋಕ್ ಸಮಿತಿ ಸದಸ್ಯ ಜಿ.ಕೆ. ಅನುವಿಂದ್ (೨೪) ಎಂಬವರು ಬಂಧಿತರಾದ ಆರೋಪಿಗಳು. ಈ ನಾಲ್ವರನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನ ದಲ್ಲಿರಿಸಲಾಗಿದೆ. ಈ  ಘಟನೆಗೆ ಸಂಬಂಧಿಸಿ ಪೊಲೀಸರು ಒಟ್ಟು ೩೦ ಮಂದಿ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ಕಪ್ಪು ಪತಾಕೆ  ಪ್ರದರ್ಶಿಸಿದ ಯೂತ್ ಕಾಂಗ್ರೆಸ್ ನೇತಾರರಾದ ಸುಧೀಶ್ ವೆಳ್ಳಿಚ್ಚಾಲ್ (೩೦), ಮಹಿತಾ ಮೋಹನನ್ (೩೫), ಪಿ.ಪಿ. ರಾಹುಲ್ (೩೦), ಕೆಎಸ್‌ಯುನ ಸಂಜು ಸಂತೋಷ್, ಮಿಥುನ್ ಕುಳಪ್ಪುರಂ (೩೩) ಮತ್ತು ಸಾಯಿ ಶರಣ್ (೧೯) ಎಂಬವರ ವಿರುದ್ಧವೂ ಇನ್ನೊಂದೆಡೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇವರು ಸೇರಿದಂತೆ ಏಳು ಮಂದಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಘರ್ಷಣೆಯಲ್ಲಿ ಗಾಯಗೊಂಡಿದ್ದರು.

RELATED NEWS

You cannot copy contents of this page