ಆಂಬುಲೆನ್ಸ್ ಕಳವುಗೈದು ಸಾಗಿಸುತ್ತಿದ್ದಾಗ ಅಪಘಾತ: ಆರೋಪಿ ತಕ್ಷಣ ಸೆರೆ

ಮಂಜೇಶ್ವರ: ಆಸ್ಪತ್ರೆ ಬಳಿ ನಿಲ್ಲಿಸಿದ್ದ ಆಂಬುಲೆನ್ಸ್‌ನ್ನು ವ್ಯಕ್ತಿಯೋರ್ವ ಕಳವುಗೈದು ಸಾಗಿಸುತ್ತಿದ್ದ ವೇಳೆ  ಅದು ಅಪಘಾತಕ್ಕೀಡಾಗಿದ್ದು, ಇದರಿಂದ ಆರೋಪಿಯನ್ನು ಸುಲಭದಲ್ಲಿ ಸೆರೆಹಿಡಿಯಲು ಪೊಲೀಸರಿಗೆ  ಸಾಧ್ಯವಾದ ಘಟನೆ ನಡೆದಿದೆ.  ಪತ್ವಾಡಿ ನೌಫಲ್ ಮಂಜಿಲ್ ನಿವಾಸಿ ಮೊಹಮ್ಮದ್ ನೌಫಲ್ ಯಾನೆ ಸವಾದ್ (೨೧) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.

ಪಚ್ಲಂಪಾರೆ ನಿವಾಸಿ ಮೊಹಮ್ಮದ್ ರಿಯಾಸ್ ಎಂಬವರ ಆಂಬುಲೆನ್ಸ್‌ನ್ನು ನಿನ್ನೆ ಸಂಜೆ ಉಪ್ಪಳದ  ಆಸ್ಪತ್ರೆಯೊಂದರ ಸಮೀಪ ನಿಲ್ಲಿಸಲಾಗಿತ್ತು.  ಕೀಲಿಕೈಯನ್ನು ಅದರಲ್ಲೇ ಇರಿಸಿ ಮೊಹಮ್ಮದ್ ರಿಯಾಸ್ ಅಲ್ಲಿಂದ ತೆರಳಿದ್ದು, ಅಲ್ಪ ಹೊತ್ತಿನಲ್ಲೇ ಮರಳಿದ್ದರು.  ಆದರೆ ಅಷ್ಟರಲ್ಲಿ ಆಂಬುಲೆನ್ಸ್ ನಾಪತ್ತೆಯಾಗಿತ್ತು. ಈ ಬಗ್ಗೆ ಅವರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಎಸ್‌ಐ ನಿಖಿಲ್ ನೇತೃತ್ವದಲ್ಲಿ ಪೊಲೀಸರು ವಾಹನದ ಜಿಪಿಎಸ್ ವ್ಯವಸ್ಥೆ  ಮೂಲಕ ಶೋಧ ಆರಂಭಿಸಿದ್ದರು. ಇದೇ ವೇಳೆ ಈ ಆಂಬುಲೆನ್ಸ್‌ನನ್ನು ಆರೋಪಿ ಕೊಂಡೊಯ್ಯುತ್ತಿದ್ದ ವೇಳೆ ಬಡಾಜೆ ಚೌಕಿ ರಸ್ತೆಯಲ್ಲಿ ಉದಯ ಸೆಟ್ಟಿ ಎಂಬವರ ಆವರಣಗೋಡೆಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಅಲ್ಲಿನ ನಾಗರಿಕರು ಆಂಬುಲೆನ್ಸ್ ಚಲಾಯಿಸಿದ ಮೊಹಮ್ಮದ್ ನೌಫಲ್‌ನನ್ನು ಹಿಡಿದಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲ್ಲಿಗೆ ತೆರಳಿದ ಪೊಲೀಸರು ಆಂಬುಲೆನ್ಸ್ ಕಳ್ಳನನ್ನು ಕೈಯಾರೆ  ಹಿಡಿದಿದ್ದಾರೆ. ಆಂಬುಲೆನ್ಸ್ ಕಳವು ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದು, ಬಂಧಿತನನ್ನು ಇಂದು ನ್ಯಾಯಾ ಲಯಕ್ಕೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ನಡೆದ ಆಟೋ ರಿಕ್ಷಾ ಕಳವು ಪ್ರಕರಣವೊಂದರಲ್ಲಿ ಮೊಹಮ್ಮದ್ ನೌಫಲ್ ಆರೋಪಿಯಾಗಿದ್ದಾನೆಂದೂ ಪೊಲೀಸರು ತಿಳಿಸಿದ್ದಾರೆ.

You cannot copy contents of this page