ಒಣಗಲು ಹಾಕಿದ್ದ ಅಡಿಕೆ ಕಳವು: ಅಬಕಾರಿ ಪ್ರಕರಣದ ಆರೋಪಿ ಸಹಿತ ಇಬ್ಬರು ಸೆರೆ

ಮುಳ್ಳೇರಿಯ: ವೈದ್ಯರ ಮನೆ ಅಂಗಳದಲ್ಲಿ ಒಣಗಲು ಹಾಕಿದ್ದ ೪೦೦೦ ಅಡಿಕೆ ಕಳವುಗೈದ ಪ್ರಕರಣದಲ್ಲಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡ ಅಬಕಾರಿ ಪ್ರಕರಣದ ಆರೋಪಿ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಮುಳ್ಳೇರಿಯ ಪಾರಕ್ಕಲ್‌ನ ರೋಬಿನ್ (೪೫), ಮುಳಿಯಾರು ಪೇರಡ್ಕದ ಹರೀಶ್ ಕುಮಾರ್ (೪೧) ಎಂಬಿವರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ರಾತ್ರಿ ಮುಳ್ಳೇರಿಯದ  ಡಾಕ್ಟರ್  ಸುಕೇಶ್ ರಾಜ್‌ರ ಮನೆ ಅಂಗಳದಿಂದ ಅಡಿಕೆ ಕಳವು ನಡೆದಿದೆ. ಒಣಗಲು ಹಾಕಿದ್ದ ಅಡಿಕೆ ಕಳವಿಗೀಡಾದ ಬಗ್ಗೆ ನಿನ್ನೆ ಬೆಳಿಗ್ಗೆ ಡಾಕ್ಟರ್ ಆದೂರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಮೊನ್ನೆ ರಾತ್ರಿ ಇಬ್ಬರು ಗೋಣಿ ಚೀಲದಲ್ಲಿ  ಯಾವುದೋ ವಸ್ತುವನ್ನು ಹೊತ್ತುಕೊಂಡೊಯ್ಯುತ್ತಿರುವುದನ್ನು ಕೆಲವರು ಕಂಡಿರುವುದಾಗಿ ತಿಳಿದುಬಂ ದಿದೆ.  ಈ ಬಗ್ಗೆ ಪ್ರಶ್ನಿಸಿದವರಲ್ಲಿ ರಬ್ಬರ್‌ನ ಗಟ್ಟಿ ಹಾಲನ್ನು ಗೋಣಿ ಚೀಲದಲ್ಲಿ ತುಂಬಿಸಿ ಕೊಂಡೊಯ್ಯುತ್ತಿರುವುದಾಗಿ ಅವರು ತಿಳಿಸಿದ್ದರೆನ್ನಲಾಗುತ್ತಿದೆ.  ಈ ಹಿನ್ನೆಲೆಯಲ್ಲಿ ರೋಬಿನ್ ಹಾಗೂ ಹರೀಶ್ ಕುಮಾರ್‌ರನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದ್ದಾರೆ. ಈ ವೇಳೆ ಈ ಇಬ್ಬರು ಅಡಿಕೆ ಕಳವುಗೈದಿರುವು ದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಅಡಿಕೆಯನ್ನು ಪೊಲೀಸರಿಗೆ ತೋರಿಸಿ ಕೊಟ್ಟಿದ್ದಾರೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗಳಿಗೆ ಎರಡು ವಾರಗಳ ರಿಮಾಂಡ್ ವಿಧಿಸ ಲಾಗಿದೆ. ಸೆರೆಗೀಡಾದ ರೋಬಿನ್‌ನನ್ನು ಈ ಹಿಂದೆ ಅಬಕಾರಿ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇತ್ತೀಚೆಗೆ ಈತ ಜೈಲಿನಿಂದ ಬಿಡುಗಡೆ ಗೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page