ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವಕ ಕುಸಿದು ಬಿದ್ದು ಸಾವು
ಕಾಸರಗೋಡು: ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವಕ ಕುಸಿದು ಬಿದ್ದು, ಬಳಿಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಚೆಮ್ನಾಡ್ ನೆಂಜಿಲ್ ಹೌಸ್‌ನ ಪಿ. ಚಂದ್ರನ್ ನಾಯರ್- ಕಾರ್ತ್ಯಾಯಿನಿ ದಂಪತಿ ಪುತ್ರ ಶ್ಯಾಮ್ ಕುಮಾರ್ (೩೨) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಷಷ್ಠಿ ಮಹೋತ್ಸವದ ಅಂಗವಾಗಿ ತಲಕ್ಲಾಯಿ ಕ್ಷೇತ್ರಕ್ಕೆ ಹೋಗಿ ರಾತ್ರಿ ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಳಿಕ ಅಲ್ಲೇ ಕುಸಿದು ಬಿದ್ದರು. ವಿಷಯ ತಿಳಿದ ಕಾಸರಗೋಡು ಪೊಲೀಸರು ಮತ್ತು ಅಗ್ನಿಶಾಮಕ ದಳ ತಕ್ಷಣ ಆಗಮಿಸಿ ಶ್ಯಾಮ್‌ಕುಮಾರ್‌ರನ್ನು ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ಮುಳಿಯಾರು ಕೋಟೂರಿನ ಕಾರ್ಖಾನೆಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ದುಡಿಯುತ್ತಿದ್ದ ಮೃತರು ಸಹೋದರಿಯರಾದ ಚಾಂದಿನಿ, ಶರಣ್ಯ ಎಂಬವರನ್ನು ಅಗಲಿದ್ದಾರೆ. ಕಾಸರಗೋಡು ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.