ನಗರಸಭಾ ಅಧ್ಯಕ್ಷ ಸ್ಥಾನ ; ಮುಸ್ಲಿಂ ಲೀಗ್‌ನಲ್ಲಿ ತಲೆಯೆತ್ತಿದ ಭಿನ್ನಮತ
ಕಾಸರಗೋಡು: ಕಾಸರಗೋಡು ನಗರಸಭೆಯ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ಮುಸ್ಲಿಂ ಲೀಗ್‌ನಲ್ಲಿ ಭಾರೀ ಭಿನ್ನಮತ ತಲೆಯೆತ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆ ಬಳಿಕ ಜಿಲ್ಲಾ ಮುಸ್ಲಿಂ ಲೀಗ್ ಸಮಿತಿ ಮಾಡಲಾದ ಹೊಂದಾಣಿಕೆ ಪ್ರಕಾರ ಅಧ್ಯಕ್ಷರಾಗಿ ಐದು ವರ್ಷ ಆಡಳಿತೆಯ ಮೊದಲ ಎರಡೂವರೆ ವರ್ಷ ವಿ.ಎಂ. ಮುನೀರ್ ಹಾಗೂ ನಂತರದ ಎರಡು ವರ್ಷ ಅಬ್ಬಾಸ್ ಬೀಗಂರನ್ನು ಅಧ್ಯಕ್ಷರನ್ನಾಗಿ ನೇಮಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದರ ಪ್ರಕಾರ ವಿ.ಎಂ. ಮುನೀರ್ ಅವರನ್ನು ನಗರಸಭಾ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಹಿಂದೆ ಬದಲಾದ ಹೊಂದಾಣಿಕೆ ಪ್ರಕಾರ ವಿ.ಎಂ. ಮುನೀರ್ ಅವರು ನಗರಸಭಾ ಅಧ್ಯಕ್ಷ ಸ್ಥಾನದ ಎರಡೂವರೆ ವರ್ಷದ ಅವಧಿ ಇನ್ನೇನು ಕೊನೆಗೊಳ್ಳಲಿದೆ. ಅವರ ಬದಲು ಅಬ್ಬಾಸ್ ಬೀಗಂ ಮುಂದಿನ ಎರಡೂವರೆ ವರ್ಷಗಳ ತನಕ ನಗರಸಭೆಯ ಅಧ್ಯಕ್ಷರಾಗಬೇಕಾಗಿದೆ. ಆದರೆ ಅಬ್ಬಾಸ್ ಬೀಗಂರ ಬದಲು, ಅತೀ ಹೆಚ್ಚು ನಗರಸಭಾ ಕೌನ್ಸಿಲರ್‌ಗಳು ಹೊಂದಿರುವ ತಳಂಗರೆಯವರನ್ನೇ ಹೊಸ ಅಧ್ಯಕ್ಷರಾಗಿ ನೇಮಿಸಬೇಕೆಂದೂ ಅದರಂತೆ ಮೊಹಮ್ಮದ್ ಕುಂಞಿ ತಾಯಲಂಗಾಡಿಯವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಲೀಗ್‌ನ ತಳಂಗರೆಯ ಒಂದು ವಿಭಾಗದವರು ಈಗ ಹೊಸ ಬೇಡಿಕೆ ಮುಂದಿರಿಸಿದ್ದಾರೆ. ಆದರೆ ಒಡಂಬಡಿಕೆ ಪ್ರಕಾರ ಅಬ್ಬಾಸ್ ಬೀಗಂರನ್ನೇ ಮುಂದಿನ ಅವಧಿಗೆ ಅಧ್ಯಕ್ಷರನ್ನಾಗಿಸಬೇಕಾಗಿದೆ ಎಂದು ಶಾಸಕ ಎನ್.ಎ. ನೆಲ್ಲಿಕುನ್ನು ಸೇರಿದಂತೆ ಹೆಚ್ಚಿನವರು ಆಗ್ರಹಪಟ್ಟಿದ್ದಾರೆ.
ಅಣಂಗೂರು ಪ್ರದೇಶದ ಮಮ್ಮುಚ್ಚಾಲ್‌ರನ್ನು ಅಧ್ಯಕ್ಷರನ್ನಾಗಿಸಬೇಕೆಂದು ಇನ್ನೂ ಕೆಲವರು ಆಗ್ರಹಪಟ್ಟಿದ್ದಾರೆ. ಈ ಹೊಸ ಅಧ್ಯಕ್ಷ ಸ್ಥಾನಕ್ಕೆ ಮೂವರ ಹೆಸರು ಪ್ರಸ್ತಾಪಿಸಲ್ಪಟ್ಟಿದೆ. ಇದು ಮುಸ್ಲಿಂ ಲೀಗ್‌ನ ಜಿಲ್ಲಾ ಸಮಿತಿಗೆ ಒಂದು ಹೊಸ ತಲೆನೋವಾಗಿ ಪರಿಣಮಿಸಿದೆ.