ಸೊಳ್ಳೆ ನಾಶಕ ದ್ರಾವಕ ಸೇವಿಸಿ ಒಂದೂವರೆ ವರ್ಷದ ಮಗು ಮೃತ್ಯು
ಕಾಸರಗೋಡು: ಸೊಳ್ಳೆ ನಾಶಕ ದ್ರಾವಕ ಸೇವಿಸಿ ಒಂದೂವರೆ ವರ್ಷದ ಹೆಣ್ಣು ಮಗು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಹೊಸದುರ್ಗ ಬಾವಾನಗರದ ಜಿ.ಪಿ. ಜಂಶೀರ್-ಪಿ.ಕೆ. ಅನ್‌ಸಿಫಾ ದಂಪತಿ ಪುತ್ರ ಜಿಸಐರಿನ್ (ಒಂದೂವರೆ ವರ್ಷ) ಸಾವನ್ನಪ್ಪಿದ ಮಗು.
ಜಂಶೀರ್‌ರ ೧೯ ದಿನ ಪ್ರಾಯ ದ ಪುತ್ರ ಜಹಾನ್ ಮಾಲೀಕ್‌ನ ಮೊದಲ ಕೇಶಮುಂಡನೆ ಕಾರ್ಯ ಕ್ರಮ ಕಳೆದ ಭಾನುವಾರ ಅವರ ಮನೆಯಲ್ಲಿ ನಡೆಯುತ್ತಿತ್ತು. ಆಗ ಜಂಶೀರ್‌ರ ಮೂರು ವರ್ಷದ ಇನ್ನೊಂದು ಮಗು ಮತ್ತು ಜಿಸ ಐರಿನ್ ಮನೆಯ ಕೊಠಡಿಯೊಂ ದರಲ್ಲಿ ಆಟವಾಡುತ್ತಿದ್ದರು. ಆಗ ಆ ಕೊಠಡಿಯ ಕಿಟಿಕಿ ಬಳಿ ಇರಿಸಲಾಗಿದ್ದ ಸೊಳ್ಳೆ ನಾಶಕ ದ್ರಾವಕ ತುಂಬಿಸಿದ್ದ ಬಾಟಲಿಯನ್ನು ಕಂಡ ಆ ಮಕ್ಕಳಿಬ್ಬರು ಅದನ್ನು ತೆಗೆಯಲೆತ್ನಿಸಿದಾಗ ಆ ಬಾಟಲಿ ಕೆಳಗೆ ಬಿದ್ದು ಅದರ ಮುಚ್ಚಳ ತೆರೆಯಲ್ಪಟ್ಟಿತ್ತು. ಬಿದ್ದ ಸದ್ದು ಕೇಳಿದ ಮನೆಯವರು ತಕ್ಷಣ ಕೊಠಡಿ ಯೊಳಗೆ ಬಂದಾಗ ಕೆಳಗೆ ಬಿದ್ದಿದ್ದ ಬಾಟಲಿಯನ್ನು ಎತ್ತಿ ಅದರಲ್ಲಿದ್ದ ಕೀಟನಾಶಕ ದ್ರಾವಕವನ್ನು ಜಿಸ ಕುಡಿಯುತ್ತಿರುವುದನ್ನು ಕಂಡು ಒಮ್ಮೆಲೇ ದಿಗಿಲುಗೊಂಡು ತಕ್ಷಣ ಆಕೆಯನ್ನು ಮೊದಲು ಹೊಸದುರ್ಗದ ಆಸ್ಪತ್ರೆಗೆ ನಂತರ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ ಬಳಿಕ ವೈದ್ಯರು ನೀಡಿದ ಸಲಹೆಯಂತೆ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ಮಗುವಿನ ಪ್ರಾಣಪಕ್ಷಿ ಹಾರಿಹೋಯಿತು. ಹೊಸದುರ್ಗ ಪೊಲೀಸರು ಈ ಬಗ್ಗೆ ಸಹಜ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.