ಕಳೆದುಹೋದ ಚಿನ್ನದ ಸರ ಮನೆ ವರಾಂಡದಲ್ಲಿ ಪ್ರತ್ಯಕ್ಷ: ತಂದಿರಿಸಿದ ವ್ಯಕ್ತಿ ಬರೆದ ಪತ್ರವೂ ಲಭ್ಯ

ಕಾಸರಗೋಡು: ಕಳೆದು ಹೋಯಿತೆಂದು ಎಣಿಸಿದ್ದ ೪ ಪವನ್ ತೂಕದ ಚಿನ್ನಾಭರಣ ಮನೆ ವರಾಂಡದಲ್ಲಿ ಪತ್ತೆಯಾಗಿದೆ. ಜೊತೆಗೆ ಒಂದು ಪತ್ರವೂ ಲಭಿಸಿದೆ. ಪೊಯಿನಾಚಿ ಪರಂಬ್ ನಿವಾಸಿ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ದಾಮೋದರನ್‌ರ ಪತ್ನಿ ಗೀತಾರ ಚಿನ್ನದ ಸರ ೧೦ ದಿನದ ಹಿಂದೆ ಬಸ್ ಪ್ರಯಾಣ ವೇಳೆ ಕಳೆದು ಹೋಗಿತ್ತು. ಅಪಹರಿಸಿದ್ದೋ, ಬಿದ್ದು ಹೋದದ್ದೋ ಎಂದು ತಿಳಿದು ಬಂದಿರಲಿಲ್ಲ. ಆದರೆ ಸರವನ್ನು ಕಂಡಾಗ ತಂದಿರಿಸಿದ ವ್ಯಕ್ತಿಯ ಉತ್ತಮ ಮನಸ್ಸಿನ ಬಗ್ಗೆ ಮನೆಯವರು ಪ್ರಶಂಸೆ ವ್ಯಕ್ತಪಡಿಸಿದರು. ಸರದ ಜೊತೆಗೆ ಲಭಿಸಿದ ಪತ್ರದಲ್ಲಿ ಈ ರೀತಿ ಬರೆಯಲಾಗಿತ್ತು. “ಈ ಸರ ನನ್ನ ಕೈಗೆ ಸಿಕ್ಕಿ ಇಂದಿಗೆ 9 ದಿನವಾ ಯಿತು. ಸಿಕ್ಕಿದಾಗ ಬಹಳ ಸಂತೋಷವಾಯಿತು. ಆದರೆ ಕೈಗೆ ತೆಗೆದಾಗ ಯಾವುದೋ ನೆಗೆಟಿವ್ ಫೀಲಿಂಗ್ ಉಂಟಾಯಿತು. ಕೈ ನಡುಗುವಂತೆ ತೋರಿತು. ಬಹಳ ಆಲೋಚಿಸಿದ ಬಳಿಕ ಅದನ್ನು ಹಿಂತಿರುಗಿಸುವ ಬಗ್ಗೆ ತೀರ್ಮಾನ ಕೈಗೊಂಡೆ. ಆ ಬಳಿಕ ವಿಳಾಸ ಪತ್ತೆಹಚ್ಚಿ ಇಲ್ಲಿಗೆ ತಂದಿರಿಸಿದ್ದೇನೆ. ನಾನು ನನ್ನ ಬಗ್ಗೆ ಇಲ್ಲಿ ಪ್ರಸ್ತಾಪಿಸುವುದಿಲ್ಲ. ಇಷ್ಟು ದಿನ ಈ ಸರವನ್ನು ಕೈಯಲ್ಲಿರಿಸಿಕೊಂಡು ನಿಮಗೆ ನೋವು ನೀಡಿರುವುದಕ್ಕೆ ಕ್ಷಮೆ ಇರಲಿ” ಹೀಗೆ ಬರೆದಿರುವ ಪತ್ರದ ಕೆಳಗೆ ಕುಂಡಂಗುಳಿ ಎಂದು ಸ್ಥಳನಾಮ ಮಾತ್ರವಿದೆ.

ಈ ತಿಂಗಳ 4ರಂದು ಸಂಜೆ ಬಸ್ ಪ್ರಯಾಣ ಮಧ್ಯೆ ಸರ ಕಳೆದು ಹೋಗಿತ್ತು. ಬಳಿಕ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದರು. ವಾಟ್ಸಪ್ ಗ್ರೂಪ್‌ಗಳಲ್ಲಿ ಸಂದೇಶವನ್ನು ಹಂಚಿ ಕೊಳ್ಳಲಾಗಿತ್ತು. ಸರದ ಭಾವಚಿತ್ರಸಹಿತ ವಾಟ್ಸಪ್‌ಗಳಲ್ಲಿ ಸಂದೇಶವನ್ನು ಪೋಸ್ಟ್ ಮಾಡಲಾಗಿತ್ತು. ಆಭರಣಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಮಧ್ಯೆ ನಿನ್ನೆ ಇದು ಮನೆ ವರಾಂಡದಲ್ಲಿ ಪ್ರತ್ಯಕ್ಷಗೊಂ ಡಿದೆ. ವಾಟ್ಸಪ್‌ನಲ್ಲಿರುವ ವಿಳಾಸ ನೋಡಿ  ಆಭರಣ ಸಿಕ್ಕಿದ ವ್ಯಕ್ತಿ ಇಲ್ಲಿ ತಂದಿರಿಸಿರಬೇಕೆಂದು ಶಂಕಿಸಲಾಗಿದೆ. ಅಪರಿಚಿತನಾದ ಆ ವ್ಯಕ್ತಿಗೆ ದೇವರು ಒಳ್ಳೆಯದನ್ನು ಕರುಣಿಸಲಿ ಎಂದು ದಾಮೋದರನ್ ಹಾಗೂ ಮನೆಯವರು ಗ್ರೂಪ್‌ನಲ್ಲಿ ಸಂದೇಶ ರವಾನಿಸಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

You cannot copy contents of this page