ಕುಂಬಳೆ: ಆರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ಗೇಟ್ ನಿರ್ಮಾಣಕ್ಕಿದ್ದ ತಡೆಯನ್ನು ನ್ಯಾಯಾಲಯ ರದ್ದುಪಡಿಸಿದೆ. ಕ್ರಿಯಾ ಸಮಿತಿ ಸಹಿತವಿರುವವರು ನೀಡಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಾಧೀಶ ಎನ್. ನಗರೇಶ್ ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಕೇಂದ್ರ ಸರಕಾರದ ಅನುಮತಿಯೊಂದಿಗೆ ಟೋಲ್ ಗೇಟ್ ನಿರ್ಮಿಸುತ್ತಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಿಟ್ಟ ವಾದವನ್ನು ನ್ಯಾಯಾಲಯ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಇನ್ನು ಇಲ್ಲಿ ಟೋಲ್ ಗೇಟ್ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಬಹುದಾಗಿದೆ. ಇದೇ ವೇಳೆ ಈ ತೀರ್ಪಿನ ವಿರುದ್ಧ ವಿಭಾಗೀಯ ಪೀಠಕ್ಕೆ ಅಪೀಲು ನೀಡುವುದಾಗಿ ಕ್ರಿಯಾ ಸಮಿತಿ ಸದಸ್ಯನಾಗಿರುವ ಅಶ್ರಫ್ ಕಾರ್ಲೆ ತಿಳಿಸಿದ್ದಾರೆ. ಕ್ರಿಯಾ ಸಮಿತಿಗೆ ಬೇಕಾಗಿ ಕಾಸರಗೋಡು ಬ್ಲೋಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ನೀಡಿದ ಅರ್ಜಿಯಲ್ಲಿ ಒಂದು ತಿಂಗಳ ವರೆಗೆ ಯಥಾಸ್ಥಿತಿ ಮುಂದುವರಿಸಲು ಹೈಕೋರ್ಟ್ ಮೂರು ತಿಂಗಳ ಹಿಂದೆ ಆದೇಶ ನೀಡಿತ್ತು.
1964ರ ನ್ಯಾಶನಲ್ ಹೈವೇ ಕಾನೂನು ಪ್ರಕಾರ ಟೋಲ್ಗೇಟ್ಗಳ ಮಧ್ಯೆ 60 ಕಿಲೋ ಮೀಟರ್ ದೂರವಿರಬೇಕು ಎಂಬ ರಾಷ್ಟ್ರೀಯ ಹೆದ್ದಾರಿ ಕಾಯ್ದೆಯನ್ನು ಉಲ್ಲಂಘಿಸಿರುವುದಾಗಿ ಅರ್ಜಿಯಲ್ಲಿ ಆರೋಪಿಸಲಾಗಿತ್ತು. ತಲಪಾಡಿಯಲ್ಲಿ ಈಗಾಗಲೇ ಟೋಲ್ ಬೂತ್ ಇರುವ ಕಾರಣ ಕೇವಲ 20 ಕಿಲೋ ಮೀಟರ್ ದೂರದ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಿಸುತ್ತಿರುವುದು ಕಾನೂನು ಬಾಹಿರವೆಂದು ತಿಳಿಸಿ ನ್ಯಾಯವಾದಿ ಸಜಿನ್ ಇಬ್ರಾಹಿಂ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.