ಮೂತ್ರ ವಿಸರ್ಜನೆ ವೇಳೆ ರಸ್ತೆ ಬದಿಯ ಮರದ ರೆಂಬೆ ತಲೆಗೆ ಬಿದ್ದು ಲಾರಿ ಚಾಲಕ ದಾರುಣ ಮೃತ್ಯು

ಬದಿಯಡ್ಕ: ರಸ್ತೆ ಬದಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಲಾರಿ ಚಾಲಕನ ತಲೆ ಮೇಲೆ ಮರದ ರೆಂಬೆ ಮುರಿದು ಬಿದ್ದು ಅವರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ದ.ಕ ಜಿಲ್ಲೆಯ ಬಂಟ್ವಾಳ ಪೆರಾಜೆ ಕೂಡೋಲು ಎಂಬಲ್ಲಿನ ಕೆ. ಜಗದೀಶ ಗೌಡ (5೦) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.  ನಿನ್ನೆ ಬೆಳಿಗ್ಗೆ 6.15ರ ವೇಳೆ ಪೆರ್ಲ-ಸೀತಾಂಗೋಳಿ ರಸ್ತೆಯ ಬೆದ್ರಂಪಳ್ಳದಲ್ಲಿ ಘಟನೆ ಸಂಭವಿಸಿದೆ. ಜಗದೀಶ್ ಗೌಡ ಮೂಡುಬಿದ್ರೆಯಿಂದ ಕಾಸರಗೋಡು ಭಾಗಕ್ಕೆ ಲಾರಿಯಲ್ಲಿ ಕೋಳಿ ಆಹಾರ ಸಾಗಿಸುತ್ತಿದ್ದರು. ಜತೆಗೆ ಕ್ಲೀನರ್ ಕೂಡಾ ಇದ್ದರು. ಬೆದ್ರಂಪಳ್ಳ ನಿರ್ಜನ ಪ್ರದೇಶಕ್ಕೆ  ತಲುಪಿದಾಗ  ಲಾರಿಯನ್ನು ರಸ್ತೆ ಬದಿ ನಿಲ್ಲಿಸಿದ ಜಗದೀಶ ಗೌಡ ಮರವೊಂದರ ಬುಡದಲ್ಲಿ ಮೂತ್ರ ವಿಸರ್ಜಿಸುತ್ತಿದ್ದರು. ಈ ವೇಳೆ ಮರದ ರೆಂಬೆ ಮುರಿದು   ಅವರ ತಲೆ ಮೇಲೆ ಬಿದ್ದಿದೆ. ಘಟನೆಯನ್ನು ಕಂಡ ಲಾರಿ ಕ್ಲೀನರ್ ಆ ರಸ್ತೆಯಲ್ಲಿ ಬರುತ್ತಿದ್ದ ಇತರ ವಾಹನ ಪ್ರಯಾಣಿಕರಲ್ಲಿ  ತಿಳಿಸಿದ್ದಾರೆ.

ಕೂಡಲೇ ಸ್ಥಳೀಯರು ತಲುಪಿ ಜಗದೀಶ ಗೌಡರನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ತಲುಪಿಸಿದರು. ಅಷ್ಟರೊಳಗೆ ಅವರು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು  ಕೇಸು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಊರಿಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಯಿತು.

ದಿವಂಗತರಾದ ಕಾಂತಪ್ಪ ಗೌಡ-ವೀರಮ್ಮ ದಂಪತಿ ಪುತ್ರನಾದ ಮೃತರು ಪತ್ನಿ ಪ್ರೇಮ, ಮಕ್ಕಳಾದ  ಮೋಶಿತ್, ಬಿಂದು, ಸಹೋ ದರರಾದ ಗಿರೀಶ್, ಕೇಶವ, ಭರತ್ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page