ಕಾಸರಗೋಡಿನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ: ದೇಶದ ಸಂವಿಧಾನ ತತ್ವ ಚಿಂತನೆಗಳ ಮೇಲೆ ಉಂಟಾಗುತ್ತಿರುವ ಸವಾಲುಗಳ ಬಗ್ಗೆ ಜಾಗ್ರತೆ ಪಾಲಿಸಬೇಕು-ಸಚಿವ ಕೃಷ್ಣನ್‌ಕುಟ್ಟಿ

ಕಾಸರಗೋಡು: ದೇಶದ ಸಂವಿಧಾನ ತತ್ವ ಚಿಂತನೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಎಲ್ಲರೂ ಜಾಗ್ರತೆ ಪಾಲಿಸಬೇಕೆಂದು ರಾಜ್ಯ ವಿದ್ಯುತ್ ಖಾತೆ ಸಚಿವ ಕೆ.ಕೃಷ್ಣನ್ ಕುಟ್ಟಿ  ಕರೆ ನೀಡಿದ್ದಾರೆ. ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಅದ್ದೂರಿಯ ಸ್ವಾತಂತ್ರ್ಯೋತ್ಸವದಲ್ಲಿ ತ್ರಿವರ್ಣ ಧ್ವಜ ಹಾರಿಸಿ ವಂದನೆ ಸ್ವೀಕರಿಸಿ ಸಚಿವರು ಮಾತನಾಡುತ್ತಿದ್ದರು.

ಸಮಾಜವಾದ, ಧರ್ಮ ನಿರಪೇಕ್ಷತೆ ಮತ್ತು ಫೆಡರಲಿಸಂ ಇದು ಇಂದು ಬೆದರಿಕೆ ಎದುರಿಸುತ್ತಿದೆ. ದೇಶದ ಒಟ್ಟು ಸಂಪತ್ತಿನಲ್ಲಿ ಶೇ. ೪೫ರಷ್ಟು ದೇಶದಲ್ಲಿರುವ ಕೇವಲ1 ಶೇ.ದಷ್ಟು ಮಾತ್ರವೇ ಇರುವ ಶ್ರೀಮಂತ ವರ್ಗದವರ ಕೈಯಲ್ಲಿದೆ. ಇದೇ ಸಂದರ್ಭದಲ್ಲಿ ಶೇ. ೫೦ರಷ್ಟು ಬಡವರ ಕೈಯಲ್ಲಿ ಕೇವಲ ಶೇ. 3ರಷ್ಟು ಸಂಪತ್ತು ಮಾತ್ರವೇ ಇದೆ. ಇದು ಅತೀ ದೊಡ್ಡ ಅಸಮತ್ವವಾಗಿದೆ.  ಪ್ರಜಾತಂ ತ್ರದೇಶವಾದ ಭಾರತಕ್ಕೆ ಇಂತಹ ಅಸಮತ್ವ ಭೂಷಣವಲ್ಲ. ಮಾಧ್ಯಮ ಸ್ವಾತಂತ್ರ್ಯವನ್ನು ನಿಯಂತ್ರಿಸುವಿಕೆ ಹಾಗೂ ಭಿನ್ನಾಭಿಪ್ರಾಯಗಳನ್ನು ರಾಷ್ಟ್ರದ್ರೋಹವನ್ನಾಗಿ ಚಿತ್ರೀಕರಿಸುವ ರೀತಿ ದೇಶದ ಪ್ರಜಾಪ್ರಭುತ್ವ ನೀತಿಗೆ ಹೊಂದಿಕೊಳ್ಳುವಂತದ್ದಲ್ಲ.

ಮಾದಕದ್ರವ್ಯ ವ್ಯಸನ ಇಂದು ಒಂದು ಮಹಾ ವಿಪತ್ತು ಆಗಿ ಪರಿಣಮಿಸತೊಡಗಿದೆ. ಒಳ್ಳೆಯ ದಿನಗಳಿಗಾಗಿ ಎಲ್ಲರೂ ಸಂಘಟಿತರಾಗಿ ಇಂತಹ ವಿಪತ್ತನ್ನು ಎದುರಿಸಬೇಕಾಗಿದೆ. ಯುವಜನಾಂಗ ದೇಶದ ಅತೀ ದೊಡ್ಡ ಶಕ್ತಿಯಾಗಿದೆ. ಇವರು ದೇಶದ ಉತ್ತಮ ಭವಿಷ್ಯಕ್ಕಾಗಿ ದಾರಿದೀಪವಾಗಬೇಕಾ ಗಿದೆಯೆಂದೂ ಸಚಿವರು ಕರೆ ನೀಡಿದರು.

ಪದ್ಮಶ್ರೀ ಪುರಸ್ಕಾರ ವಿಜೇತ ಸತ್ಯನಾರಾಯಣ ಬೆಳೇರಿಯವರನ್ನು ಇದೇ ಸಂದರ್ಭದಲ್ಲಿ ಸಚಿವರು ಸನ್ಮಾನಿಸಿ ಗೌರವಿಸಿದರು.ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ವಿಜಯ್ ಭರತ್ ರೆಡ್ಡಿ ಮೊದಲಾದವರು ಕಾರ್ಯ ಕ್ರಮದಲ್ಲಿ ವಂದನೆ ಸ್ವೀಕರಿಸಿದರು. ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಸಿ.ಎಚ್. ಕುಂಞಂಬು,  ಎಂ. ರಾಜಗೋಪಾಲನ್, ಜಿಲ್ಲಾ ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಹಿತ ಹಲವು ಗಣ್ಯರು  ಭಾಗವಹಿಸಿದರು. ಸ್ವಾತಂತ್ರ್ಯೋತ್ಸವದಂಗವಾಗಿ ಸ್ಟೇಡಿಯಂನಲ್ಲಿ ನಡೆದ ಪರೇಡ್‌ನಲ್ಲಿ ಪೊಲೀಸರು, ಎನ್‌ಸಿಸಿ, ಸ್ಕೌಟ್ಸ್ ಆಂಡ್ ಗೈಡ್ಸ್, ಸಶಸ್ತ್ರ ಮೀಸಲು ಪೊಲೀಸ್ ಪಡೆ ಮೊದಲಾದವರಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಒಟ್ಟು 15 ಪ್ಲಾಟೂನ್ ಗಳು ಇದರಲ್ಲಿ ಭಾಗವಹಿಸಿ ಮೆರುಗು ನೀಡಿದವು. ವಿವಿಧ ಕ್ಷೇತ್ರಗಳ ಪ್ರತಿಭಾನ್ವಿತರನ್ನು ಸಚಿವರು ಇದೇ ಸಂದರ್ಭದಲ್ಲಿ ಗೌರವಿಸಿದರು.

You cannot copy contents of this page