ಕರ್ನಾಟಕದ ಬಾಲಕನನ್ನು ಕುತ್ತಿಗೆ ಹಿಚುಕಿ ಕೊಂದ ಪ್ರಕರಣ: ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡ ಆರೋಪಿ 13 ವರ್ಷಗಳ ಬಳಿಕ ಸೆರೆ

ಕಾಸರಗೋಡು:  ಕರ್ನಾಟಕ ನಿವಾಸಿಯಾದ ಹತ್ತರ ಹರೆಯ ಬಾಲಕನನ್ನು ಕುತ್ತಿಗೆ ಹಿಚುಕಿ ಕೊಲೆಗೈದ ಪ್ರಕರಣದಲ್ಲಿ ಬಂಧಿತನಾಗಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು 13 ವರ್ಷಗಳ ಬಳಿಕ ನಂತರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಭಾಗಪ್ಪ ಜುವಲ್ ಪಾಳಿಯ ನಿವಾಸಿ ಸಹೀರ್ ಅಹಮ್ಮದ್ (48) ಬಂಧಿತ ಆರೋಪಿ. ನಂತರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಕರ್ನಾಟಕದಿಂದ ಹೂ ಮಾರಾಟಕ್ಕಾಗಿ ಹೊಸದುರ್ಗಕ್ಕೆ ಬಂದು ಹೊಸದುರ್ಗದ ವಸತಿಗೃಹವೊಂದರಲ್ಲಿ ವಾಸಿಸುತ್ತಿದ್ದ ಕುಟುಂಬದ ಹತ್ತು ವರ್ಷ ಪ್ರಾಯದ  ಸುನಿಲ್ ಎಂಬ ಹೆಸರಿನ ಬಾಲಕನನ್ನು ಆ ವಸತಿ ಗೃಹದ ಕೊಠಡಿಯೊಳಗೆ  2008 ಎಪ್ರಿಲ್ 17ರಂದು ಹಗಲು ಕುತ್ತಿಗೆ ಹಿಚುಕಿ ಕೊಲೆಗೈದ ಬಳಿಕ ಅಲ್ಲಿಂದ 8500 ರೂ. ನಗದನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಪೊಲೀಸರು ಆರೋಪಿಯನ್ನು ಈ ಹಿಂದೆ ಬಂಧಿಸಿದ್ದರು. ಹೂಗಳನ್ನು ಮಾರಿ ಉಪ ಜೀವನ ನಡೆಸುತ್ತಿರುವ ಕುಟುಂಬವಾಗಿದೆ ಕೊಲೆಗೈಯ್ಯಲ್ಪಟ್ಟ ಬಾಲಕನದ್ದು. ಕೊಲೆ ನಡೆಯುವ ವೇಳೆ ಬಾಲಕ ಮಾತ್ರವೇ ಆ ಕೊಠಡಿಯಲ್ಲಿದ್ದನು. ಆತನ ಕುಟುಂಬದವರು ಹೂ ಮಾರಾಟಕ್ಕಾಗಿ ಹೊರ ಹೋಗಿದ್ದರು.

ಆ ಸಂದರ್ಭ ನೋಡಿ ಆರೋಪಿ ಸಹೀರ್ ಅಹಮ್ಮದ್ ಅಕ್ರಮವಾಗಿ ಕೊಠಡಿಯೊಳಗೆ ಪ್ರವೇಶಿಸಿ ಬಾಲಕನನ್ನು ಕೊಂದು ಹಣದೊಂದಿಗೆ ಪರಾರಿ ಯಾಗಿದ್ದನೆಂದು ಆರೋಪಿಸಲಾಗಿದೆ. ಅದಕ್ಕೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಆರೋಪಿ ೨೦೧೨ರಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಂಡು ನಂತರ ತಲೆ ಮರೆಸಿಕೊಂಡಿದ್ದನು.

ಆತನ ಪತ್ತೆಗಾಗಿ ಪೊಲೀಸರು ಹಲವು ಬಾರಿ ಆತನ ಊರಿಗೆ ಸಾಗಿ ಶೋಧ ನಡೆಸಿದರೂ ಅದು ಫಲಕಾರಿಯಾಗಲಿಲ್ಲ. ಅದರಿಂದ ಆತನನ್ನು ತಲೆಮರೆಸಿಕೊಂಡಿರುವ ಆರೋಪಿಯನ್ನಾಗಿ ನಂತರ ಹೊಸದುರ್ಗದ ನ್ಯಾಯಾಲಯ ಘೋಷಿಸಿತ್ತು. ಈ ಮಧ್ಯೆ ಆರೋಪಿ ತಿರುಪತಿಯಲ್ಲಿರುವ ಬಗ್ಗೆ  ಪೊಲೀಸರಿಗೆ ಮಾಹಿತಿ ಲಭಿಸಿತು. ಅದರಂತೆ ಪೊಲೀಸರು ಅಲ್ಲಿಗೆ ಸಾಗಿ ತಿರುಪತಿ ಜಿಲ್ಲೆಯ ವೈ.ಎಸ್.ಆರ್. ಕಾಲನಿಯಿಂದ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಳಿಕ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

RELATED NEWS

You cannot copy contents of this page