ಕಾಸರಗೋಡು: ಮುಖ್ಯೋ ಪಾಧ್ಯಾಯರು ವಿದ್ಯಾರ್ಥಿಯ ಕೆನ್ನೆಗೆ ಹೊಡೆದ ಪರಿಣಾಮ ಆತನ ಕರ್ಣ ತಮಟೆಗೆ ಹಾನಿಯುಂಟಾದ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಇಂದು ಬೆಳಿಗ್ಗೆ ನಿರ್ದೇಶ ನೀಡಿದ್ದಾರೆ. ಇದೇ ವೇಳೆ ಈ ಘಟನೆಗೆ ಸಂಬಂಧಿಸಿ ರಾಜ್ಯ ಮಕ್ಕಳ ಹಕ್ಕು ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗೆ ಮುಖ್ಯೋಪಾಧ್ಯಾಯರು ಕೆನ್ನೆಗೆ ಹೊಡೆದಿರು ವುದಾಗಿ ಆರೋಪಿಸ ಲಾಗಿದೆ. ಆ ವಿಷಯ ತಿಳಿದ ಅದೇ ಶಾಲೆಯ ವಿದ್ಯಾರ್ಥಿನಿಯೂ ಆಗಿರುವ ಸಹೋದರಿ ಅಲ್ಲೇ ಕುಸಿದು ಬಿದ್ದಿದ್ದಳು. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ಸಾಗಿಸಿ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಆತನ ಕರ್ಣ ತಮಟೆಗೆ ಹಾನಿಯುಂಟಾಗಿ ದೆಯೆಂದೂ ಅದರಿಂದಾಗಿ ಶಸ್ತ್ರ ಕ್ರಿಯೆ ನಡೆಸಬೇಕೆಂಬ ನಿರ್ದೇಶ ವನ್ನು ವೈದ್ಯರು ನೀಡಿದರೆನ್ನಲಾಗಿದೆ. ಇದು ನಂತರ ಭಾರೀ ವಿವಾದಕ್ಕೆ ದಾರಿಮಾಡಿಕೊಟ್ಟಿದೆ.
ಅದಾದ ಬೆನ್ನಲ್ಲೇ ಅದಕ್ಕೆ ಸಂಬಂಧಿಸಿ ಮಕ್ಕಳ ಹಕ್ಕು ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತಲ್ಲದೆ ಸಮಗ್ರ ತನಿಖೆಗೆ ಇನ್ನೊಂದೆಡೆ ಶಿಕ್ಷಣ ಸಚಿವರು ನಿರ್ದೇಶ ನೀಡಿದ್ದಾರೆ.
ವಿದ್ಯಾರ್ಥಿಯ ಮೇಲೆ ನಡೆದ ದೌರ್ಜನ್ಯ ಪ್ರತಿಭಟಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕುಂಡಂಕುಳಿ ಹೈಯರ್ ಸೆಕೆಂಡರಿ ಶಾಲೆಗೆ ಇಂದು ಬೆಳಿಗ್ಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅದು ಭಾರೀ ಘರ್ಷಣೆಗೂ ದಾರಿಮಾಡಿಕೊಟ್ಟಿದೆ. ಬಳಿಕ ಪೊಲೀಸರು ಪ್ರತಿ ಭಟನೆಗಾರರನ್ನು ವಶಕ್ಕೆ ತೆಗೆದು ಸ್ಥಿತಿ ಶಾಂತಿಗೊಳಿಸಿದರು.