ಮಂಜೇಶ್ವರ: ಕಾಪಾ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಕುಖ್ಯಾತ ಕ್ರಿಮಿನಲ್ ಸಹಿತ ಏಳು ಮಂದಿಯನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ತಂಡದ ಕೈಯಿಂದ ಬಂದೂಕು ಹಾಗೂ 5 ಮದ್ದುಗುಂಡುಗಳನ್ನು ವಶಪಡಿಸಲಾಗಿದೆ. ಅಂಗಡಿಪದವಿನ ಸೈಫುದ್ದೀನ್ ಯಾನೆ ಪೂಚ ಸೈಫುದ್ದೀನ್ (29), ಬೇಡಗಂ ಕುತ್ತಿಕ್ಕೋಲ್ ಅಳಕ್ಕಾವ್ ಹೌಸ್ನ ನಿತಿನ್ರಾಜ್ (25), ಕುತ್ತಿಕ್ಕೋಲ್ ವೆಳ್ಳಾಲ ಹೌಸ್ನ ಎಚ್. ರತೀಶ್ (26), ಚೆಮ್ನಾಡ್ ಕೊಂಬನಡ್ಕದ ಪ್ರವಿತ್ ಸಿ.ಆರ್ (20) ಎಂಬಿವರನ್ನು ಮಂಜೇಶ್ವರ ಠಾಣೆ ಇನ್ಸ್ಪೆಕ್ಟರ್ ಇ. ಅನೂಬ್ ಕುಮಾರ್ ಹಾಗೂ ತಂಡ ಕಳ್ಳಬಂದೂಕು ಪ್ರಕರಣದಲ್ಲಿ ಸೆರೆಹಿಡಿದಿದ್ದಾರೆ. ಮೊನ್ನೆ ಮಧ್ಯಾಹ್ನ 12.30ಕ್ಕೆ ಹೊಸಬೆಟ್ಟು ಕೊಡ್ಡೆ ಎಂಬಲ್ಲಿಂದ ತಂಡವನ್ನು ಬಂಧಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸೆರೆಗೀಡಾದವರಲ್ಲಿ ಸೈಫುದ್ದೀನ್ ಕಾಪಾ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ವರ್ಕಾಡಿ ಭಾಗದಲ್ಲಿ ಬೇಟೆಗಾಗಿ ನಿತಿನ್ ಹಾಗೂ ತಂಡ ತಲುಪಿತ್ತೆನ್ನಲಾಗಿದೆ. ಇದೇ ವೇಳೆ ನಿತಿನ್ರಾಜ್ ಹಾಗೂ ಆತನ ಸ್ನೇಹಿತರನ್ನು ಅಪಹರಿಸಿ ಹಲ್ಲೆಗೈದು 3 ಲಕ್ಷ ರೂ. ಬೇಡಿಕೆಯೊಡ್ಡಿರುವುದಾಗಿ ನೀಡಿದ ದೂರಿನಂತೆ ಪೂಚ ಸೈಫು, ಈತನ ಸಹಚರರಾದ ಕಾಸರಗೋಡು ಹಿದಾಯತ್ನಗರ ಮುಟ್ಟತ್ತೋಡಿ ಬಿಸ್ಮಿಲ್ಲಾ ಮಂಜಿಲ್ನ ಎಂ.ಎಚ್. ಮೊಯ್ದೀನ್ ಯಾನೆ ಚರುಮುರು ಮೊಯ್ದೀನ್ (29), ಉಳಿಯತ್ತಡ್ಕ ನೇಶನಲ್ ನಗರದ ಮುಹಮ್ಮದ್ ಸುಹೈಲ್ (28) ಎಂಬಿವರನ್ನು ಪೊಲೀಸ್ ತಂಡ ಬಂಧಿಸಿದೆ. ಶುಕ್ರವಾರ ರಾತ್ರಿ 1 ಗಂಟೆ ವೇಳೆ ನಿತಿನ್ರಾಜ್ ಹಾಗೂ ಇಬ್ಬರು ಸ್ನೇಹಿತರನ್ನು ವರ್ಕಾಡಿ ಮಜೀರ್ಪಳ್ಳದಿಂದ ಸೈಫುದ್ದೀನ್ ಹಾಗೂ ತಂಡ ಅಪಹರಿಸಿದೆ. ನಿತಿನ್ರಾಜ್ ಹಾಗೂ ಸ್ನೇಹಿತರನ್ನು ತಡೆದು ನಿಲ್ಲಿಸಿ ಬ್ಯಾಗ್ನಲ್ಲಿದ್ದ ಕಳ್ಳ ಬಂದೂಕು ಹಾಗೂ ಮದ್ದುಗುಂಡುಗಳನ್ನು ತಂಡ ವಶಪಡಿಸಿಕೊಂಡಿರುವುದಾಗಿ ಪ್ರಕರಣದಲ್ಲಿ ತಿಳಿಸಲಾಗಿದೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆಯೊಡ್ಡಿ ಮೊಬೈಲ್ ಫೋನ್ ಹಾಗೂ 10 ಸಾವಿರ ರೂಪಾಯಿಗಳನ್ನು ಅಪಹರಿಸಿರುವುದಾಗಿಯೂ ಅನಂತರ ಕಾರಿನಲ್ಲಿ ಹತ್ತಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಹಲ್ಲೆಗೈದ ಬಳಿಕ ಮೂರು ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿರುವುದಾಗಿ ತಿಳಿಸಿ ನಿತಿನ್ರಾಜ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಇನ್ಸ್ಪೆಕ್ಟರ್ ಇ.ಅನೂಬ್ ಕುಮಾರ್, ಎಸ್ಐ ಕೆ.ಆರ್. ಉಮೇಶ್ ಎಂಬಿವರು ನಡೆಸಿದ ತನಿಖೆಯಲ್ಲಿ ಎರಡು ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ.