ಕಾಸರಗೋಡು: ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯ ಕೆನ್ನೆಗೆ ಹೊಡೆದು ಕರ್ಣ ತಮ್ಮಟೆಗೆ ಹಾನಿ ಉಂಟಾದ ಘಟನೆಗೆ ಸಂಬಂಧಿಸಿ ಪ್ರಸ್ತುತ ಶಾಲೆಯ ಮುಖ್ಯೋಪಾಧ್ಯಾಯ ಎಂ. ಅಶೋಕನ್ ವಿರುದ್ಧ ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರ.
ಘಟನೆಗೆ ಸಂಬಂಧಿಸಿ ಪೊಲೀಸರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಆತನ ಹೇಳಿಕೆ ಸಂಗ್ರಹಿಸಿ ಬಳಿಕ ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ನೀಡಿದ ನಿರ್ದೇಶ ಪ್ರಕಾರ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಟಿ.ವಿ. ಮಧುಸೂದನನ್ ನಿನ್ನೆ ಶಾಲೆಗೆ ಆಗಮಿಸಿ ಮುಖ್ಯೋಪಾಧ್ಯಾಯರು ಮತ್ತಿತರ ಅಧ್ಯಾಪಕರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರ ಹೊರತಾಗಿ ಗಾಯಗೊಂಡ ವಿದ್ಯಾರ್ಥಿ ಮತ್ತು ಆತನ ಮನೆಯವರ ಹೇಳಿಕೆಯನ್ನು ಅವರು ದಾಖಲಿಸಿಕೊಂಡಿದ್ದಾರೆ. ಈ ಕುರಿತಾದ ವರದಿಯನ್ನು ಶಿಕ್ಷಣ ಇಲಾಖೆಗೆ ಈಗಾಗಲೇ ಸಲ್ಲಿಸಲಾಗಿದೆ ಯೆಂದು ಅವರು ತಿಳಿಸಿದ್ದಾರೆ. ಈ ವರದಿಯ ಆಧಾರದಲ್ಲಿ ಸರಕಾರ ಮುಂದಿನ ಕ್ರಮ ಕೈಗೊಳ್ಳಲಾಗಿ ದೆಯೆಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಗಾಯಗೊಂಡ ವಿದ್ಯಾರ್ಥಿಯ ತಾಯಿಯನ್ನು ಶಿಕ್ಷಣ ಸಚಿವರು ನಿನ್ನೆ ಫೋನ್ ಕರೆ ಮಾಡಿ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಇದಕ್ಕೆ ಸಂಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ರಾಜ್ಯ ಮಕ್ಕಳ ಹಕ್ಕು ಆಯೋಗವೂ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದೆ. ಈತಿಂಗಳ 11ರಂದು ಶಾಲೆಯ ಅಸೆಂಬ್ಲಿ ನಡೆಯುತ್ತಿದ್ದ ವೇಳೆ ಕುಂಡಂಕುಳಿ ನಿವಾಸಿಯಾಗಿರುವ ವಿದ್ಯಾರ್ಥಿಗೆ ಮುಖ್ಯೋಪಾಧ್ಯಾಯರು ಹೊಡೆದು ಗಾಯಗೊಳಿಸಿರುವುದಾಗಿ ಆರೋಪಿಸಲಾಗಿದೆ. ವಿದ್ಯಾರ್ಥಿಗೆ ಹೊಡೆದುದನ್ನು ಪ್ರತಿಭಟಿಸಿ ಬಿಜೆಪಿ, ಯೂತ್ ಕಾಂಗ್ರೆಸ್ ಮತ್ತು ಎಸ್‌ಎಫ್‌ಐ ನಿನ್ನೆ ಶಾಲೆಗೆ ಪ್ರತ್ಯೇಕಪ್ರತ್ಯೇಕವಾಗಿ ಮೆರವಣಿಗೆ ನಡೆಸಿದ್ದು ಇದರ ಹೊರತಾಗಿ ಮಹಿಳಾ ಮೋರ್ಛಾ ಇಂದು ಅಪರಾಹ್ನ ಶಾಲೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿದೆ.