ಕಾಸರಗೋಡು: ಆಟೋರಿಕ್ಷಾ ಕಾರ್ಮಿಕ ಯೂನಿಯನ್ (ಐಎನ್‌ಟಿಯುಸಿ)ಯ ಜಿಲ್ಲಾ ಅಧ್ಯಕ್ಷ ವಿ.ವಿ. ಸುಧಾಕರನ್ (61) ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಇವರು ನೀಲೇಶ್ವರ ಕೊಟ್ರಚ್ಚಾಲ್ ನಿವಾಸಿ ಹಾಗೂ ಹೊಸದುರ್ಗ ಸಹಕಾರಿ ಬ್ಯಾಂಕ್ ನಿರ್ದೇಶಕ, ಕಾಂಗ್ರೆಸ್‌ನ ಹೊಸದುರ್ಗ ಬ್ಲೋಕ್‌ನ ಮಾಜಿ ಕಾರ್ಯದರ್ಶಿಯೂ ಆಗಿದ್ದರು. ಇವರು ನಿನ್ನೆ ತಮ್ಮ ಸ್ನೇಹಿತರಿಗೆ ವಾಟ್ಸಪ್‌ನಲ್ಲಿ ‘ನನ್ನನ್ನು ಕ್ಷಮಿಸಿ, ನಿಮ್ಮೆಲ್ಲರ ಕ್ಷಮೆ ಯಾಚಿಸುವೆ’ ಎಂಬ ಸಂದೇಶ ರವಾನಿಸಿದ್ದರು. ಅದಾದ ಅರ್ಧ ಗಂಟೆಯ ಬಳಿಕ ಅವರು ಚಲಾಯಿಸುತ್ತಿದ್ದ ಆಟೋರಿಕ್ಷಾ ಪಡನ್ನಕ್ಕಾಡ್ ನಂಬ್ಯಾರ್‌ಕಲ್ ರಸ್ತೆ ಬಳಿ ನಿನ್ನೆ ರಾತ್ರಿ ನಿಲುಗಡೆಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದರಿಂದ ಶಂಕೆಗೊಂಡ ಸ್ನೇಹಿತರು ಶೋಧ ನಡೆಸಿದಾಗ ಅಲ್ಲೇ ಪಕ್ಕದ ಪಡನ್ನಕ್ಕಾಡ್ ಮೇಲ್ಸೇತುವೆ ರೈಲುಹಳಿಯಲ್ಲಿ ಸುಧಾಕರನ್ ರೈಲು ಢಿಕ್ಕಿ ಹೊಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ಹೊಸದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತರು ಪತ್ನಿ ಪ್ರೀತ, ಮಕ್ಕಳಾದ ಪ್ರಣವ್, ಪೃಥ್ವಿ, ಸಹೋದರಿಯರಾದ ವಿ.ವಿ. ಶೋಭಾ (ಹೊಸದುರ್ಗ ನಗರಸಭಾ ಕೌನ್ಸಿಲರ್), ಕಮಲ, ಸುಕುಮಾರಿ, ಬೀನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.