ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ 11 ಟೋಲ್ ಪ್ಲಾಸಾಗಳ ನಿರ್ಮಾಣ ಕೆಲಸ ಆರಂಭ

ಕಾಸರಗೋಡು: ತಲಪಾಡಿಯಿಂದ ಆರಂಭಗೊಂಡು ತಿರುವನಂತಪುರ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು  11 ಟೋಲ್‌ಪ್ಲಾಸಾಗಳನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ. ಮಾತ್ರವಲ್ಲದೆ ಹೆಚ್ಚಿನೆಡೆಗಳಲ್ಲಿ ಟೋಲ್ ಪ್ಲಾಸಾಗಳ ನಿರ್ಮಾಣ ಕೆಲಸಗಳು ಈಗಾಗಲೇ ಆರಂಭಗೊಂಡಿದೆ. ತಲಪಾಡಿಯಿಂದ ಆರಂಭಗೊಂಡು ತಿರುವನಂತಪುರದ ತನಕ ಒಟ್ಟು 645 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ-66 ಹೊಂದಿದೆ. ಇದರಲ್ಲಿ ಪ್ರತಿ 60 ಕೀ.ಮೀ ಅಂತರದಲ್ಲಿ ತಲಾ ಒಂದರಂತೆ ಟೋಲ್ ಪ್ಲಾಸಾ ನಿರ್ಮಿಸಲಾಗುತ್ತಿದೆ.

ತಲಪ್ಪಾಡಿಯಲ್ಲಿ ಈಗಾಗಲೇ ಟೋಲ್ ಪ್ಲಾಸಾ ಕಾರ್ಯವೆಸಗುತ್ತಿದೆ. ಅದನ್ನು ಹೊರತುಪಡಿಸಿದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಚಾಲಿಂಗಾಲ್‌ನಲ್ಲಿ ಟೋಲ್ ಪ್ಲಾಸಾ ನಿರ್ಮಿಸಲಾಗುವುದು. ಇದರ ನಿರ್ಮಾಣ ಕೆಲಸ ಈಗಾಗಲೇ ಆರಂಭಗೊಂಡಿದೆ. ಇದರ ಹೊರತಾಗಿ ಕಣ್ಣೂರು ಜಿಲ್ಲೆಯಲ್ಲಿ ಕಲ್ಯಾಶ್ಶೇರಿ, ಕಲ್ಲಿಕೋಟೆಯ -ವೆಟ್ಟಿಚ್ಚಿರ, ತೃಶೂರು -ನಾಟ್ಟಿಗ, ಎರ್ನಾಕುಳಂ -ಕುಂಬಳಂ, ಆಲಪ್ಪುಳ- ಕೊಮ್ಮಡಿ, ಕೊಲ್ಲಂ ಜಿಲ್ಲೆಯಲ್ಲಿ ಒಚ್ಚಿರ ಮತ್ತು ಕಲ್ಲುವಾದುಕ್ಕಲ್ ಹಾಗೂ ತಿರುವನಂ ತಪುರ ಜಿಲ್ಲೆಯ ತಿರುವೆಲ್ಲಾ ಮತ್ತು ಆಕುಳಂನಲ್ಲಿ ಟೋಲ್ ಪ್ಲಾನ್ ನಿರ್ಮಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕುಂಬಳೆಗೆ ಸಮೀಪದ ಆರಿಕ್ಕಾಡಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಟೋಲ್‌ಪ್ಲಾಸಾ ಕೇವಲ ತಾತ್ಕಾಲಿಕ ಮಾತ್ರವೇ ಆಗಿದೆ ಎಂದು ಚಾಲಿಂಗಾಲ್‌ನಲ್ಲಿ ನಿರ್ಮಿಸಲಾಗುವ ಟೋಲ್ ಪ್ಲಾಸಾ ನಿರ್ಮಾಣ ಕೆಲಸ ಪೂರ್ಣಗೊಂಡು ಅದು ಕಾರ್ಯಾರಂಭಗೊಳ್ಳುವ ತನಕ ಮಾತ್ರವೇ ಆರಿಕ್ಕಾಡಿ ಟೋಲ್ ಪ್ಲಾಸಾ ಮುಂದುವರಿಯಲಿದೆ ಎಂದೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ.

2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ವಸೂಲಿ ಮಾಡುವ ಕಾನೂನು ಪ್ರಕಾರ ಟೋಲ್ ಪ್ಲಾಸಾ ದರ ನಿಶ್ಚಯಿಸಲಾ ಗುವುದು. ಇದರಂತೆ ಕಾರುಗಳು ಒಂದು ಕಿ.ಮೀ. ಸಂಚರಿಸಲು ತಲಾ ೬೫ ಪೈಸೆಯಂತೆ, ಮಿನಿ ಬಸ್‌ಗಳು ತಲಾ 1.05 ರೂ. ಮತ್ತು ಬಸ್‌ಗಳು ಹಾಗೂ ಲಾರಿ, ಟ್ರಕ್‌ಗಳಿಗೆ ಕಿಲೋ ಮೀಟರ್ 1ಕ್ಕೆ ತಲಾ 2.20 ರೂ.ನಂತೆ ಟೋಲ್ ಶುಲ್ಕ ನಿಗದಿಪಡಿಸಲಾಗಿದೆ. ಮಾತ್ರವಲ್ಲ ಮಲ್ಟಿ ಆಕ್ಸಿಲ್ ವಾಹನಗಳಿಗೆ ಕಿಲೋ ಮೀಟರ್ ಒಂದಕ್ಕೆ ತಲಾ3.45 ರೂ.ನಂತೆ ಈ ಶುಲ್ಕ ನೀಡಬೇಕಾಗಿದೆ. ಆದರೆ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳಿಗೆ ಟೋಲ್ ಶುಲ್ಕವನ್ನು ಅನ್ವಯಗೊಳಿಸಲಾಗಿಲ್ಲ.

RELATED NEWS

You cannot copy contents of this page