ಗಲ್ಫ್‌ಗೆ ಪರಾರಿಯಾಗಲೆತ್ನಿಸಿದ ಪೋಕ್ಸೋ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿಯಾಗಿ ನಂತರ ಗಲ್ಫ್‌ಗೆ ಪರಾರಿಯಾಗಲೆತ್ನಿಸಿದ ಪ್ರಕರಣದ ವ್ಯಕ್ತಿಯನ್ನು ಭಾರತ-ನೇಪಾಳ ಗಡಿಯಿಂದ ಮೇಲ್ಪರಂಬ ಪೊಲೀಸರು  ಬಂಧಿಸಿದ್ದಾರೆ.

ಚೆಮ್ನಾಡು ಪಂಚಾಯತ್‌ನ ಪೆರುಂಬಳ ಕುದಿರಿಲ್ ಹೌಸ್‌ನ ಪಿ. ಅಬ್ದುಲ್ ಹ್ಯಾರೀಸ್ (41) ಬಂಧಿತ ಆರೋಪಿ,ಕಳೆದ ಜೂನ್ ೨೯ರಂದು ಹನ್ನೊಂದು ವರ್ಷದ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಆರೋಪಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಆ ವೇಳೆ ಆರೋಪಿ ಮುಂಬೈಗೆ ಪರಾರಿಯಾಗಿದ್ದನು. ಅಲ್ಲಿಂದ ಆತ ವಿದೇಶಕ್ಕೆ ಪರಾರಿಯಾಗಲು ಸಾಧ್ಯತೆ ಇದೆಯೆಂಬ ಶಂಕೆಯಿಂದ ಆತನ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟೀಸ್ ಹೊರಡಿಸಿದ್ದರು. ಅದನ್ನು ತಿಳಿದ ಆರೋಪಿ ನೇಪಾಳದ ಮೂಲಕ ಗಲ್ಫ್‌ಗೆ ಪರಾರಿಯಾಗಲು ಯತ್ನ ನಡೆಸಿದ್ದನು.

ಇದೇ ವೇಳೆ ಲುಕೌಟ್ ನೋಟೀಸಿನ ಆಧಾರದಲ್ಲಿ ಭಾರತ-ನೇಪಾಳ ಗಡಿ ಭದ್ರತಾಪಡೆಯವರು ಆರೋಪಿಯನ್ನು ಗಡಿಯಲ್ಲಿ ತಡೆದುನಿಲ್ಲಿಸಿ ವಶಕ್ಕೆ ತೆಗೆದುಕೊಂಡು ನಂತರ ಈ ವಿಷಯವನ್ನು ಅವರು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್‌ಭರತ್‌ರೆಡ್ಡಿಗೆ ತಿಳಿಸಿದ್ದರು. ಅದರಂತೆ ಮೇಲ್ಪರಂಬ   ಠಾಣೆಯ ಇನ್‌ಸ್ಪೆಕ್ಟರ್ ಎ.ಸಂತೋಷ್ ಕುಮಾರ್ ನೀಡಿದ ನಿರ್ದೇಶ ಪ್ರಕಾರ ಎಸ್‌ಐ ಎ.ಕೆ. ಅನೀಶ್,ಎಎಸ್‌ಐ ವಿ. ರಮೇಶ್‌ರನ್ನೊಳಗೊಡ ಪೊಲೀಸರ ತಂಡ ನೇಪಾಳಕ್ಕೆ ಸಾಗಿ ಅಲ್ಲಿಂದ ಆರೋಪಿಯನ್ನು ಮೇಲ್ಪರಂಬ ಠಾಣೆಗೆ ತಲುಪಿಸಿದರು. ನಂತರ ಆರೋಪಿಯನ್ನು  ನ್ಯಾಯಾಲಯದ ನಿರ್ದೇಶ ನ್ಯಾಯಾಂಗ ಪ್ರಕಾರ ಬಂಧನದಲ್ಲಿರಿಸಲಾಯಿತು.

You cannot copy contents of this page