ಮಂಜೇಶ್ವರ: ಕಾರಿನಲ್ಲಿ ಮಾದಕವಸ್ತು ಸಾಗಾಟ ನಡೆಸುತ್ತಿದ್ದ ವೇಳೆ ಸೆರೆಗೀಡಾದ ಮೂವರು ಆರೋಪಿಗಳಿಗೆ ಕಾಸರಗೋಡು ನ್ಯಾಯಾಲಯ ರಿಮಾಂಡ್ ವಿಧಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ಲೋವರ್ ಬಜಾರ್ನ ಮುಹಮ್ಮದ್ ಅಬ್ಬಾಸ್ (30), ಬಂಟ್ವಾಳ ಕಲ್ಲಡ್ಕ ಗೋಳ್ತಮಜಲಿನ ಮಹಮ್ಮದ್ ಜುನೈದ್ (32), ಕಲ್ಲಡ್ಕದ ಅನ್ಸಾರ್ ಸಾಬಿತ್ (26) ಎಂಬಿವರಿಗೆ ರಿಮಾಂಡ್ ವಿಧಿಸಲಾಗಿದೆ. ನಿನ್ನೆ ಮುಂಜಾನೆ ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಇ. ಅನೂಬ್ ಕುಮಾರ್ ನೇತೃತ್ವದಲ್ಲಿ ಈ ಮೂವರನ್ನು ಬಂಧಿಸಲಾಗಿತ್ತು. ಇನ್ಸ್ಪೆಕ್ಟರ್ರ ನೇತೃತ್ವದಲ್ಲಿ ತಲಪ್ಪಾಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆಗಮಿಸಿದ ಕಾರನ್ನು ಪರಿಶೀಲಿಸಿದಾಗ ಅದರಲ್ಲಿ 28 ಗ್ರಾಂ ಎಂಡಿಎಂಎ ಹಾಗೂ 2 ಕಿಲೋ ಗಾಂಜಾ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಈ ಮೂವರನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದರು.
