ಕಾಸರಗೋಡು: ಅಕ್ರಮವಾಗಿ ಹಿತ್ತಿಲಿಗೆ ನುಗ್ಗಿ ದಂಪತಿಗೆ ಕಲ್ಲೆಸೆದು, ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಪ್ರಕರಣದ ಒಂದನೇ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (2) ನ್ಯಾಯಾಧೀಶೆ ಪ್ರಿಯಾ ಕೆ. ಅವರು ೩ ವರ್ಷ ಸಜೆ ಹಾಗೂ 35,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಳ್ಳಾರ್ ನೀಲಿಮಲ ನಿವಾಸಿ ಶಿಜು ಬೇಬಿ (44) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 4 ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಶಿಕ್ಷಿಸಲ್ಪಟ್ಟ ಆರೋಪಿಯ ತಂದೆ ಕೆ.ಸಿ. ಬೇಬಿ (74) ಈ ಪ್ರಕರಣದ ಎರಡನೇ ಆರೋಪಿಯಾಗಿದ್ದು, ಅವರ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
2019 ಮೇ 10ರಂದು ಬೆಳಿಗ್ಗೆ 8.30ಕ್ಕೆ ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ನೀಲಿಮಲ ಎಂಬ ಸ್ಥಳದಲ್ಲಿ ವಾಸಿಸುತ್ತಿರುವ ಗಿರೀಶ್ ಕುಮಾರ್ ಮತ್ತು ಅವರ ಪತ್ನಿ ಸವಿತಾ ಕುಮಾರಿ ಎಂಬವರ ಮೇಲೆ ಹಲ್ಲೆ ನಡೆಸಿದ ದೂರಿನಂತೆ ಈ ಇಬ್ಬರು ಆರೋಪಿಗಳ ವಿರುದ್ಧ ರಾಜಪುರಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅಂದು ರಾಜಪುರಂ ಪೊಲೀಸ್ ಠಾಣೆಯ ಎಸ್ಐ ಆಗಿದ್ದ ರಾಜೀವನ್ ಕೆ. ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಚಂದ್ರಮೋಹನ್ ಜಿ. ಮತ್ತು ನ್ಯಾಯವಾದಿ ಚಿತ್ರಕಲಾ ಎಂಬವರು ನ್ಯಾಯಾಲಯದಲ್ಲಿ ವಾದಿಸಿದ್ದರು.