ತಿರುವನಂತಪುರ: ಯುವತಿಯ ರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಕೂಟತ್ತಿಲ್‌ರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತನದಿಂದ ಮುಂದಿನ ಆರು ತಿಂಗಳ ತನಕ ಅಮಾನತುಗೊಳಿಸಲಾ ಗಿದೆ. ಆದರೆ ಪಕ್ಷದಿಂದ ಅಮಾನತು ಗೊಂಡರೂ ರಾಹುಲ್ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿಲ್ಲ ವೆಂಬ ನಿಲುವಿಗೆ ಕಾಂಗ್ರೆಸ್ ನೇತೃತ್ವ ಬಂದಿದೆ. ಆ ಮೂಲಕ ರಾಹುಲ್ ವಿರುದ್ದದ ಕ್ರಮವನ್ನು ಕಾಂಗ್ರೆಸ್ ಅಮಾನತಿಗೆ ಮಾತ್ರವಾಗಿ ಸೀಮಿತಗೊಳಿಸಿದೆ. ಇದರಿಂದಾಗಿ ರಾಹುಲ್ ಇನ್ನು ಕಾಂಗ್ರೆಸ್ ಮತ್ತು ಯುಡಿಎಫ್‌ನ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ರಾಹುಲ್ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಬೇಕಾಗಿ ಬರಲಿದೆ. ಹಾಗಾದಲ್ಲಿ ತಮಗೆ ತಿರುಗೇಟಾಗಿ ಪರಿಣಮಿಸಬಹುದು ಮಾತ್ರವಲ್ಲ ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸುವ ಸಾಧ್ಯತೆಯಿದೆಯೆಂಬ ಲೆಕ್ಕಾಚಾರ ಕಾಂಗ್ರೆಸ್ ಹಾಕಿಕೊಂಡಿದೆ. ಆದ್ದರಿಂದ ಸದ್ಯ ರಾಹುಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿಲ್ಲ ಎಂಬ ನಿಲುವಿಗೆ ಕಾಂಗ್ರೆಸ್ ನೇತೃತ್ವ ಬಂದಿದೆ. ಮಾತ್ರವಲ್ಲ ಆರೋಪಗಳ ಬಗ್ಗೆ ಕಾಂಗ್ರೆಸ್ ನೇತೃತ್ವ ರಾಹುಲ್‌ರಿಂದ ಇನ್ನೊಂದೆಡೆ ಸ್ಪಷ್ಟೀಕರಣವನ್ನೂ ಕೇಳಿದೆ. ಸ್ಪಷ್ಟೀಕರಣ ತೃಪ್ತಿಕರವಾಗದಿದ್ದಲ್ಲಿ ಅವರನ್ನು ಪಕ್ಷದಿಂದ ವಜಾಗೈಯ್ಯುವ ಸುಳಿವನ್ನೂ ಕಾಂಗ್ರೆಸ್ ನೇತೃತ್ವ ನೀಡಿದೆ.
ರಾಜ್ಯ ವಿಧಾನಸಭಾ ಅಧಿವೇಶನ ಸೆ. 15ರಂದು ಆರಂಭಗೊಳ್ಳಲಿದ್ದು, ಆ ವೇಳೆ ರಾಹುಲ್ ವಿಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳುವಂತಿಲ್ಲ. ಅವರು ಪ್ರತ್ಯೇಕ ಬ್ಲೋಕ್‌ನಲ್ಲಿ ಕುಳಿತಕೊಳ್ಳಬೇಕಾಗಿ ಬರಲಿದೆ.