ಉಜಿರೆ: ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ಮತ್ತು ಶವಗಳನ್ನು ಹೂತಿರುವ ಆರೋಪ ಮಾಡಿ ಬಂಧನಕ್ಕೊಳಗಾಗಿರುವ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಬೆಳಿಗ್ಗೆ ಉಜಿರೆಯ ಹೋರಾಟಗಾರ ತಿಮರೋಡಿಯವರ ಮನೆಗೆ ಕರೆತಂದು ಪರಿಶೀಲನೆ ಪ್ರಕ್ರಿಯೆ ನಡೆಸಿದರು. ಈ ಸಂದರ್ಭದಲ್ಲಿ ತಿಮರೋಡಿಯವರ ಮನೆಯ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬೆಳಿಗ್ಗೆ ಉಜಿರೆ ಕಡೆಗೆ ಆಗಮಿಸಿದ ಎಸ್‌ಐಟಿ ಅಧಿಕಾರಿಗಳ ತಂಡ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ಕರೆತಂದಿತ್ತು. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಅಧಿಕಾರಿಗಳು ತಿಮರೋಡಿ ಮನೆಯಲ್ಲಿ ಪರಿಶೀಲನೆ ನಡೆಸಿದರು.
ಪ್ರಕರಣದ ದೂರುದಾರನಾಗಿದ್ದು, ಬಳಿಕ ಆರೋಪಿಯಾಗಿ ಪರಿವರ್ತನೆಗೊಂಡಿರುವ ಚಿನ್ನಯ್ಯ ತಾನು ತಿಮರೋಡಿಯವರ ಮನೆಯಲ್ಲಿ ಆಶ್ರಯ ಪಡೆದಿರುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರಬೇಕೆಂದು ತಿಳಿದು ಬಂದಿದೆ. ತಿಮರೋಡಿಯವರ ಮನೆಯ ಎರಡು ಕಿಲೋ ಮೀಟರ್ ದೂರದಲ್ಲಿಯೇ ಪೊಲೀಸರು ಮಾಧ್ಯಮ ಪ್ರತಿನಿಧಿಗಳನ್ನು ತಡೆದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಧರ್ಮಸ್ಥಳದಲ್ಲಿ ಹಲವು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ತಾನು ಹಲವು ಮೃತದೇಹಗಳನ್ನು ಹೂತಿರುವುದಾಗಿ ಚಿನ್ನಯ್ಯ ಆರೋಪಿಸಿದ್ದ. ಈತನ ಹೇಳಿಕೆ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಈತನಿಗೆ ಆಶ್ರಯ ನೀಡಿದವರ ಮನೆಗಳಲ್ಲಿ ಎಸ್‌ಐಟಿ ತಂಡ ಈಗ ಪರಿಶೀಲನೆ ಆರಂಭಿಸತೊಡಗಿದೆ.