ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ೨೦೨೧ರಲ್ಲಿ ನಡೆದ ಚುನಾವಣೆಯಲ್ಲಿ ಲಂಚ ನೀಡಲಾಗಿದೆಯೆಂದು ಆರೋಪಿಸಿ ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಮತ್ತ್ತಿತರರ ವಿರುದ್ಧ ಹೂಡಲಾಗಿದ್ದ ಪ್ರಕರಣದಲ್ಲಿ ಅವರನ್ನು ದೋಷಮುಕ್ತಗೊಳಿಸಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ರಾಜ್ಯ ಸರಕಾರ ಹಿಂತೆಗೆದುಕೊಂಡಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದ್ದ ಕೆ. ಸುರೇಂದ್ರನ್, ಬಿಜೆಪಿಯ ಕಾಸರಗೋಡಿನ ಇತರ ಐವರು ನೇತಾರರನ್ನು ನಿರಾಳಗೊಳಿಸುವಂತೆ ಮಾಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಉಮೇದ್ವಾರರಾಗಿ ಮಂಜೇಶ್ವರದಲ್ಲಿ ಸ್ಪರ್ಧಿಸಿದ್ದ ಕೆ. ಸುಂದರರನ್ನು ಅಪಹರಿಸಿಕೊಂಡು ಹೋಗಿ ಬೆದರಿಕೆಯೊಡ್ಡಿ ಅವರಿಗೆ 2.5 ಲಕ್ಷ ರೂ. ಮತ್ತು ಮೊಬೈಲ್ ಫೋನ್ ನೀಡಿ ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆಯೆಂದು ಆರೋಪಿಸಿ ಅಂದು ಇದೇ ಕ್ಷೇತ್ರದಲ್ಲಿ ಎಡರಂಗದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ವಿ. ರಮೇಶ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಈ ಕೇಸು ಕಾನೂನು ಪ್ರಕಾರವಾಗಿ ನೆಲೆಗೊಳ್ಳದು ಮಾತ್ರವಲ್ಲ ಅದೊಂದು ಕಟ್ಟುಕತೆ ಹಾಗೂ ರಾಜಕೀಯ ಪ್ರೇರಿತವಾದುದೆಂದು ಆರೋಪಿಸಿ ಆ ಪ್ರಕರಣದ ವಿರುದ್ಧ ಕೆ.ಸುರೇಂದ್ರನ್ ಹಾಗೂ ಇತರ ಐವರು ಬಿಜೆಪಿ ನೇತಾರರು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಬಳಿಕ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಸುರೇಂದ್ರನ್ ಮತ್ತಿತರರನ್ನು ನಂತರ ದೋಷಮುಕ್ತ್ತಿಗೊಳಿಸಿ ತೀರ್ಪು ನೀಡಿತ್ತು. ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಲುವಾಗಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ನಂತರ ರಾಜ್ಯ ಸರಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ಹೈಕೋರ್ಟ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು. ಇದಕ್ಕೆ ಸಮಾನವಾದ ರೀತಿಯ ಬೇರೊಂದು ಪ್ರಕರಣದ ಮರು ಪರಿಶೀಲನೆ ನಡೆಸಬೇಕೆಂದು ಕೋರಿ ರಾಜ್ಯಸರಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ಹೈಕೋರ್ಟ್ ಈ ಅರ್ಜಿ ಕಾನೂನುಪ್ರಕಾರ ನೆಲೆಗೊಳ್ಳದೆಂದು ಹೇಳಿ ಆ ಅರ್ಜಿಯನ್ನು ಈ ಹಿಂದೆ ವಜಾಗೊಳಿಸಿತ್ತು. ಆ ಹಿನ್ನೆಲೆಯಲ್ಲಿ ಮಂಜೇಶ್ವರ ಚುನಾವಣಾ ತಕರಾರು ಪ್ರಕರಣಕ್ಕೆ ಸಂಬಂಧಿಸಿ ನೀಡಲಾದ ಮರುಪರಿಶೀಲನಾ ಅರ್ಜಿಯನ್ನು ಹಿಂತೆಗೆದುಕೊಳ್ಳುವುದಾಗಿ ಹೈಕೋರ್ಟ್ಗೆ ನಂತರ ಸರಕಾರ ತಿಳಿಸಿತ್ತು. ಅದಕ್ಕೆ ಹೈಕೋರ್ಟ್ ಅನುಮತಿ ನೀಡಿದ್ದು ಅದರಂತೆ ಮರುಪರಿಶೀಲನಾ ಅರ್ಜಿಯನ್ನು ಸರಕಾರ ಕೊನೆಗೆ ಹಿಂತೆಗೆದುಕೊಂಡಿದೆ.