ಬದಿಯಡ್ಕ: ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 1 ಕಿಲೋ 312 ಗ್ರಾಂ ಗಾಂಜಾವನ್ನು ಬದಿಯಡ್ಕ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅಂಗಡಿಮೊಗರು ಪೆರ್ಲಾಡಂ ನಿವಾಸಿ ರಿಫಾಯಿ ಬಿ.ಎಂ.(42) ಎಂಬಾತನನ್ನು ಬಂಧಿಸಲಾಗಿದೆ. ಈತನ ಜತೆಗಿದ್ದ ಬಾಪಲಿಪೊನ ನಿವಾಸಿ ಬಿ.ಎಂ. ಸಹದ್ ಯಾನೆ ಅದ್ದು ಎಂಬಾತ ಓಡಿ ಪರಾರಿಯಾಗಿದ್ದಾನೆ. ನಿನ್ನೆ ರಾತ್ರಿ ಚರ್ಲಡ್ಕ ಬಸ್ ನಿಲ್ದಾಣ ಬಳಿ ಬದಿಯಡ್ಕ ಎಸ್.ಐ. ಅಖಿಲ್ ನೇತೃತ್ವದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಗೋಕುಲ್, ಶಶಿ, ಸಿ.ಪಿ.ಒ.ಗಳಾದ ಶ್ರೀನೇಶ್, ಅಭಿಲಾಶ್ ಎಂಬಿವರು ಗಸ್ತು ನಡೆಸುತ್ತಿದ್ದ ವೇಳೆ ಬಂದ ಆಟೋರಿಕ್ಷಾ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಪೊಲೀಸರನ್ನು ಕಂಡೊಡನೆ ಓರ್ವ ಅದರಿಂದಿಳಿದು ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.
