ಕಾಸರಗೋಡು: ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 11 ಲಕ್ಷ ರೂಪಾಯಿ ಕಾಳ ಧನವನ್ನು ಪೊಲೀಸರು ವಶಪಡಿಸಿ ಕೊಂಡು ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ. ಪಡನ್ನ ಕೊಕ್ಕಕಡವ್ ನಿವಾಸಿ ಎಸ್.ಸಿ. ನಿಸಾರ್ (42) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ನಿನ್ನೆ ಮಧ್ಯಾಹ್ನ ಪಳ್ಳಿಕ್ಕೆರೆ ಮೇಲ್ಸೇತುವೆ ಸಮೀಪ ನೀಲೇಶ್ವರ ಎಸ್‌ಐ ರತೀಶ್ ನೇತೃತ್ವದ ಪೊಲೀಸ್ ತಂಡ ನಡೆಸಿದ ವಾಹನ ತಪಾಸಣೆಯಲ್ಲಿ ಕಾಳಧನ ಪತ್ತೆಹಚ್ಚಲಾಗಿದೆ. ಹಣ ಸಾಗಾಟ ಬಗ್ಗೆ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ವಾಹನ ತಪಾಸಣೆ ನಡೆಸಿದ್ದರು. ಹಣ ಸಾಗಿಸಲು ಬಳಸಿದ ವಾಹನವನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸೀನಿಯ ರ್ ಸಿವಿಲ್ ಪೊಲೀಸ್ ಆಫೀಸರ್ ಗಳಾದ ಎನ್.ಎಂ. ರಮೇಶನ್, ರಾಜೀವನ್, ಡಿವೈಎಸ್‌ಪಿ ಸ್ಕ್ವಾಡ್ ಸದಸ್ಯರಾದ ಅಜಿತ್ ಪಳ್ಳಿಕ್ಕೆರೆ, ಸುಧೀಶ್ ಓರಿ, ಎ. ಜ್ಯೋತಿಷ್ ಎಂಬಿವರು ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.
