ತೃಶೂರು: ಓಣಂ ಹಬ್ಬಾಚರಣೆಯ ವಿರುದ್ಧ ಮತೀಯ ವಿದ್ವೇಷ ಪರಾಮರ್ಶೆ ನಡೆಸಿದ ಶಾಲಾ ಅಧ್ಯಾಪಿಕೆಯ ವಿರುದ್ಧ ಕುನ್ನಂಕುಳಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುನ್ನಂಕುಳಂ ಪೆರುಂಬಿಲಾವ್ ಕಲ್ಲುಂಪ್ಪುರದ ಮೆನೇಜ್ಮೆಂಟ್ ಶಾಲೆಯೊಂದರ ಅಧ್ಯಾಪಿಕೆ ಖದೀಜ ಎಂಬವರ ವಿರುದ್ದ ಈ ಕೇಸು ದಾಖಲಿಸಲಾಗಿದೆ. ಅದಾದ ಬೆನ್ನಲ್ಲೇ ಪ್ರಸ್ತುತ ಶಾಲಾ ಮೆನೇಜ್ಮೆಂಟ್ ಖದೀಜರನ್ನು ಸೇವೆಯಿಂದ ಅಮಾನತುಗೊಳಿಸಿದೆ. ಮಾತ್ರವಲ್ಲ ಖದೀಜ ನಡೆಸಿದ ಪರಾಮರ್ಶೆಯಲ್ಲಿ ತಮ್ಮದೇನೂ ಪಾತ್ರವಿಲ್ಲವೆಂದು ಶಾಲಾ ಮೆನೇಜ್ಮೆಂಟ್ ಸ್ಪಷ್ಟಪಡಿಸಿದೆ.
ಓಣಂ ಹಬ್ಬಾಚರಣೆ ಒಂದು ಹಿಂದೂ ಧರ್ಮದ ಆಚರಣೆಯಾಗಿದೆ. ಆದ್ದರಿಂದ ಅಂತಹ ಕಾರ್ಯಕ್ರಮದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಭಾಗವಹಿಸಬಾರದು. ಅದಕ್ಕೆ ಪ್ರೋತ್ಸಾಹವನ್ನೂ ನೀಡಬಾರದು ಮಾತ್ರವಲ್ಲ ಓಣಂ ಉಡುಪನ್ನೂ ಧರಿಸಬಾರದೆಂದು ವಾಟ್ಸಪ್ ಸಂದೇಶದಲ್ಲಿ ಅಧ್ಯಾಪಿಕೆ ತಿಳಿಸಿದ್ದರು. ಆ ಸಂದೇಶ ಬಹಿರಂಗಗೊಂಡ ಬೆನ್ನಲ್ಲೇ ಇದರ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಏಳತೊಡಗಿತು. ಆ ಕೂಡಲೇ ಪೊಲೀಸರು ಈ ಅಧ್ಯಾಪಿಕೆ ವಿರುದ್ಧ ಮತೀಯ ಸಾಮರಸ್ಯಕ್ಕೆ ಧಕ್ಕೆಉಂಟುಮಾಡಲೆತ್ನಿಸಿದ ಸೆಕ್ಷನ್ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.