ಕಾಸರಗೋಡು: ತಳಿಪರಂಬ ಮುಯ್ಯತ್ ಎಂಬಲ್ಲಿನ ಮಹಿಳೆಯ ಕುತ್ತಿಗೆಯಿಂದ ಎಗರಿಸಿದ ಒಂದೂ ಕಾಲು ಪವನ್ ತೂಕದ ಚಿನ್ನದ ಸರವನ್ನು ಕಾಸರಗೋಡಿನ ಜ್ಯುವೆಲ್ಲರಿಯೊಂದರಿಂದ ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದಿದ್ದಾರೆ. ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿರುವ ಬೇಕಲ ಉದುಮ ವೆಡಿತ್ತರಕ್ಕಾಲ್ ಪಾಕ್ಯಾರ ಹೌಸ್‌ನ ಮುಹಮ್ಮದ್ ಇಜಾಸ್ (23), ಸುಳ್ಯದ ಅಬ್ದುಲ್ ರಹ್ಮಾನ್ (30) ಎಂಬಿವರನ್ನು ಕಸ್ಟಡಿಗೆ ತೆಗೆದು ತನಿಖೆ ನಡೆಸಿದಾಗ ಚಿನ್ನದ ಸರವನ್ನು ಕಾಸರಗೋಡಿನ ಜ್ಯುವೆಲ್ಲರಿಯಲ್ಲಿ ಮಾರಾಟ ನಡೆಸಿರುವುದಾಗಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಸೇರಿಸಿಕೊಂಡು ಕಾಸರಗೋಡಿಗೆ ತಲುಪಿದ ತಳಿಪರಂಪ ಪೊಲೀಸರು ಜ್ಯುವೆಲ್ಲರಿಯಲ್ಲಿ ಸರ ಪತ್ತೆಹಚ್ಚಿದ್ದಾರೆ.
ಮೇ 22ರಂದು ಮುಯ್ಯಂ ವರಡೂರು ಕ್ಷೇತ್ರ ಸಮೀಪದ ಪಡಿಕ್ಕಲೆವಳಪ್ಪಿಲ್‌ನ ಟಿ. ಸುಲೋಚನ (64) ಎಂಬವರ ಕುತ್ತಿಗೆಯಿಂದ ಆರೋಪಿಗಳು ಸರ ಅಪಹರಿಸಿದ್ದರು. ಬೈಕ್‌ನಲ್ಲಿ ತಲುಪಿದ ಆರೋಪಿಗಳು ಸರ ಎಗರಿಸಿದ್ದು, ಈ ಬಗ್ಗೆ ನೀಡಿದ ದೂರಿನಂತೆ ಪೊಲೀ ಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ವೇಳೆ ಮುಹಮ್ಮದ್ ಇಜಾಸ್‌ನನ್ನು ಬೇಕಲ ಪೊಲೀಸರು ಸೆರೆ ಹಿಡಿದು ತಳಿಪರಂಬ ಪೊಲೀಸರಿಗೆ ಹಸ್ತಾಂತರಿಸಿದ್ದರು. ಈತನ ವಿರುದ್ಧ ಬೇಕಲ ಪೊಲೀಸ್ ಠಾಣೆಯಲ್ಲಿ ಕಾಪಾ ಕೇಸು, ಹೊಸದುರ್ಗ, ಬೇಡಗಂ ಠಾಣೆಗಳಲ್ಲಿ ದರೋಡೆ ಪ್ರಕರಣ ದಾಖಲಾಗಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.