ವಾಷಿಂಗ್ ಮೆಶಿನ್‌ನಿಂದ ಬೆಂಕಿ ಎದ್ದು ಮನೆಗೆ ಭಾರೀ ನಷ್ಟ

ಕಾಸರಗೋಡು: ವಾಷಿಂಗ್ ಮೆಶಿನ್‌ನಿಂದ ಬೆಂಕಿ ಎದ್ದು ಮನೆಗೆ ಅಪಾರ ನಷ್ಟವುಂಟಾದ ಘಟನೆ ನಡೆದಿದೆ.  ಪೆರುಂಬಳ ಸಮೀಪದ ಕಕ್ಕಡಂ-ಬೇನೂರು ರಸ್ತೆ ಬಳಿ ನಿವಾಸಿ ಬೆಳ್ಳೂರು ಪಂಚಾಯತ್ ಸಿಬ್ಬಂದಿ ಅಬ್ದುಲ್ ವಾಜಿದ್ ಎಂಬವರ ಮನೆಯಲ್ಲಿ ಈ ಅನಾಹುತ ಸಂಭವಿಸಿದೆ.

ಅಬ್ದುಲ್ ವಾಜೀದ್‌ರ ಪತ್ನಿ ಶಬಾನಾ ಮನೆಯ ವಾಷಿಂಗ್ ಮೆಶಿನ್‌ನಲ್ಲಿ  ಬಟ್ಟೆ ಹಾಕಿದ ಬಳಿಕ ಮನೆಯ ಕೆಳ ಅಂತಸ್ತಿನಲ್ಲಿರುವ ಅಡುಗೆ ಕೊಠಡಿಯಲ್ಲಿ ಅಡುಗೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಪ್ಲಾಸ್ಟಿಕ್ ಉರಿಯುವ ವಾಸನೆ ಉಂಟಾದಾಗ ಅದರಿಂದ ಸಂಶಯಗೊಂಡು ಅವರು ವಾಷಿಂಗ್ ಮೆಶಿನ್ ನೋಡಿದಾಗ ಅದರಲ್ಲಿ ಬೆಂಕಿ ಉರಿಯುತ್ತಿರುವುದು ಕಂಡುಬಂದಿದೆ. ಆ ಕೂಡಲೇ ಕಾಸರಗೋಡು ಅಗ್ನಿಶಾಮಕದಳಕ್ಕೆ ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ಕೆ. ಹರ್ಷ ಮತ್ತು ವಿ.ಎನ್. ವೇಣುಗೋಪಾಲನ್ ನೇತೃತ್ವದ ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿದಾಗ ಬೆಂಕಿ ಮನೆಗೂ ಆವರಿಸಿತ್ತು. ಕೂಡಲೇ ಅಗ್ನಿಶಾಮಕದಳ ಆಕ್ಸಿಜನ್ ಸಿಲಿಂಡರ್ ಧರಿಸಿ ಬೆಂಕಿ ತಗಲಿದ ಮನೆ ಕೊಠಡಿಯ ಬಾಗಿಲನ್ನು ಡೋರ್ ಬ್ರೇಕರ್ ಬಳಸಿ ಒಡೆದು ಒಳನುಗ್ಗಿ ಸತತ ಒಂದು ತಾಸುಗಳ ತನಕ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸುವಲ್ಲಿ ಸಫಲರಾದರು. ಬೆಂಕಿ ತಗಲಿದ ಮನೆ ಕೊಠಡಿಯ ಬಾಗಿಲ ಗಾಜುಗಳು ಸಿಡಿದು ಹೋಗಿದ್ದು, ವಾಷಿಂಗ್ ಮೆಶಿನ್,ಫ್ಯಾನ್, ಲ್ಯಾಪ್‌ಟಾಪ್ ಇತ್ಯಾದಿ ಹಲವು ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಉಂಟಾಗಿದೆ. ಅಗ್ನಿಶಾಮಕದಳ ನಡೆಸಿದ ಕಾರ್ಯಾಚರಣೆಯ ತಂಡದಲ್ಲಿ ಸಿಬ್ಬಂದಿಗಳಾದ ಎಂ. ರಮೇಶ್, ಎಸ್. ಅರುಣ್ ಕುಮಾರ್, ಪಿ.ಸಿ. ಮೊಹ ಮ್ಮದ್, ಸಿರಾಜುದ್ದೀನ್, ಅತುಲ್‌ರವಿ, ಹೋಮ್ ಗಾರ್ಡ್‌ಗಳಾದ ಎಸ್. ಸೋಬಿನ್ ಮತ್ತು ವಿ.ವಿ.ಉಣ್ಣಿಕೃಷ್ಣನ್ ಎಂಬವರು ಒಳಗೊಂಡಿದ್ದರು.

You cannot copy contents of this page