ಕುಂಬಳೆ: ಬಸ್ ನಿಲ್ದಾಣ ದಲ್ಲಿ ಬಿದ್ದು ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀ ಸರು ತಕ್ಷಣ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದರು. ನಿನ್ನೆ ಮಧ್ಯಾಹ್ನ ವೇಳೆ ಕುಂಬಳೆ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಬಿದ್ದಿರುವ ಬಗ್ಗೆ ಕುಂಬಳೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಇನ್ಸ್ಪೆಕ್ಟರ್ ಕೆ.ಪಿ. ಜಿಜೀಶ್ರ ನಿರ್ದೇಶದ ಮೇರೆಗೆ ಜನಮೈತ್ರಿ ಬೀಟ್ ಆಫೀಸರ್ ವಸಂತನ್, ಪೊಲೀಸರಾದ ಮಹೇಶ್, ಕಿಶೋರ್, ಚಾಲಕ ಜಾಬಿರ್ ಎಂಬಿವರು ತಕ್ಷಣ ಬಸ್ ನಿಲ್ದಾಣಕ್ಕೆ ತಲುಪಿದಾಗ ವ್ಯಕ್ತಿ ಬಿದ್ದಿರುವುದು ಕಂಡುಬಂದಿದೆ. ತಲೆ ಹಾಗೂ ಮೂಗಿಗೆ ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಕೂಡಲೇ ಕುಂಬಳೆ ಸಿಎಚ್ಸಿಗೆ ತಲುಪಿಸಿ ಬ್ಯಾಂಡೇಜ್ ಮಾಡಿಸಿದ ಬಳಿಕ ಮಂಜೇಶ್ವರದ ಸ್ನೇಹಾಲಯಕ್ಕೆ ಕೊಂಡೊಯ್ಯುತ್ತಿದ್ದ ಮಧ್ಯೆ ವ್ಯಕ್ತಿಗೆ ವಾಂತಿ ಸಹಿತ ಅಸೌಖ್ಯ ಉಂಟಾಗಿತ್ತು. ಇದರಿಂದ ಪುನಃ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ ಸ್ಕ್ಯಾನಿಂಗ್ ನಡೆಸಿದಾಗ ಗಾಯಗಂಭೀರವಲ್ಲವೆಂದು ತಿಳಿದುಬಂತು. ಇದರಿಂದ ಚಿಕಿತ್ಸೆ ನೀಡಿ ಬಳಿಕ ಮಂಜೇಶ್ವರ ಸ್ನೇಹಾಲಯಕ್ಕೆ ತಲುಪಿಸಿದರು. ಇದೇ ವೇಳೆ ಗಾಯಗೊಂಡಿರುವ ವ್ಯಕ್ತಿ ತನ್ನ ಹೆಸರು ಸುಭಾಷ್ (59) ಎಂದು ಹೇಳುತ್ತಿದ್ದು, ವಿಳಾಸ ಸ್ಪಷ್ಟಗೊಂಡಿಲ್ಲ.
ಕಾಸರಗೋಡು ಕರಂದಕ್ಕಾಡು ನಿವಾಸಿಯೆಂದೂ, ಅನಂತರ ಉಡುಪಿ ನಿವಾಸಿಯೆಂದೂ ವ್ಯಕ್ತಿ ತಿಳಿಸಿದ್ದು, ಇದರಿಂದ ಸಮಸ್ಯೆಗೊಳಗಾದ ಪೊಲೀಸರು ವ್ಯಕ್ತಿಯ ಸರಿಯಾದ ಊರು ಯಾವುದೆಂದು ಪತ್ತೆಹಚ್ಚುವ ಕ್ರಮದಲ್ಲಿ ತೊಡಗಿದ್ದಾರೆ.