ಪುತ್ರಿ, ಸಂಬಂಧಿಕನ ಮಗಳ ಮೇಲೆ ಆಸಿಡ್ ದಾಳಿ: ತಲೆಮರೆಸಿಕೊಂಡ ವ್ಯಕ್ತಿಗಾಗಿ ಶೋಧ

ಕಾಸರಗೋಡು: 17ರ ಹರೆಯದ ಸ್ವಂತ ಪುತ್ರಿ ಹಾಗೂ ಸಹೋದರನ 10 ವರ್ಷದ ಪುತ್ರಿಯ ಮೇಲೆ ವ್ಯಕ್ತಿಯೋರ್ವ ಆಸಿಡ್ ದಾಳಿ ನಡೆಸಿದ ಘಟನೆ ನಡೆದಿದೆ. ಘಟನೆ ಬಳಿಕ ತಲೆಮರೆಸಿಕೊಂಡ ಕರ್ನಾಟಕದ ಕರಿಕೆ ನಿವಾಸಿಯಾದ ಮನೋಜ್ ಎಂಬಾತನ ಪತ್ತೆಗಾಗಿ ರಾಜಪುರಂ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪನತ್ತಡಿ ಪಾರ ಕ್ಕಡವ್ ಎಂಬಲ್ಲಿನ ಸಂಬಂಧಿಕರ ಮನೆಯಲ್ಲಿ ಮನೋಜ್‌ನ ಮಗಳು ವಾಸಿಸುತ್ತಿದ್ದಳು. ಮನೋಜ್ ಪತ್ನಿಯೊಂದಿಗೆ ಸಿಟ್ಟುಗೊಂಡು ಬೇರೆಯೇ ವಾಸಿಸುತ್ತಿದ್ದಾನೆನ್ನಲಾಗಿದೆ. ಪತ್ನಿ ಹಾಗೂ ಮಗಳು ಸಹೋದರನ ಮನೆಯಲ್ಲಿರುವುದನ್ನು ತಿಳಿದು ನಿನ್ನೆ ಅಲ್ಲಿಗೆ ತಲುಪಿದ ಮನೋಜ್ ಅವರ ಮೇಲೆ ದಾಳಿ ನಡೆಸಿದ್ದಾನೆ. ಆಸಿಡ್ ಮನೋಜ್‌ನ ಮಗಳ ಕೈ ಹಾಗೂ ಕಾಲುಗಳಿಗೆ ಎರಚಲ್ಪಟ್ಟು ಗಂಭೀರ ಗಾಯಗಳಾಗಿವೆ. ಬಾಲಕಿಯ ಜೊತೆಗಿದ್ದ ಸಹೋದರನ ಮಗಳ ಮುಖ ಹಾಗೂ ಕೈಗೂ ಆಸಿಡ್ ಎರಚಲ್ಪಟ್ಟಿದೆ. ಕೂಡಲೇ ಅವರಿಬ್ಬರನ್ನೂ ಆಸ್ಪತ್ರೆಗೆ ತಲುಪಿಸಲಾಯಿತು. ಕೌಟುಂಬಿಕ ಸಮಸ್ಯೆಯೇ ದಾಳಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯತ್ನ ಸಹಿತ ವಿವಿಧ ಕಾಯ್ದೆಗಳ ಪ್ರಕಾರ ಮನೋಜ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

You cannot copy contents of this page