ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಸುಂಕ ಸಮರದ ಹೆಸರಲ್ಲಿ ಉದ್ವಿಗ್ನತೆಯ ವಾತಾವರಣ ನೆಲೆಗೊಂಡಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮತ್ತು ಪ್ರಧಾನಿ ಮೋದಿಯ ವರ ಬಗ್ಗೆ ತಳೆದಿದ್ದ ನಿಲುವಿನಿಂದ ಉಲ್ಟಾ ಹೊಡೆಯತೊಡಗಿದ್ದಾರೆ. ಭಾರತದ ಪ್ರಧಾನಿ ನರೇಂದ್ರಮೋದಿ ಓರ್ವ ಅದ್ಭುತ ಹಾಗೂ ಉತ್ತಮ ಪ್ರಧಾನಿಯಾಗಿದ್ದಾರೆ. ಮಾತ್ರವಲ್ಲ ಅವರು ನನ್ನ ಉತ್ತಮ ಸ್ನೇಹಿತರೂ ಆಗಿದ್ದಾರೆ. ನಮ್ಮ ಈ ಸ್ನೇಹವು ಯಾವಾಗಲೂ ಶಾಶ್ವತವಾಗಿದೆ ಎಂದು ಟ್ರಂಪ್ ಹೇಳಿಕೆ ನೀಡಿದ್ದು ಇದು ಸುಂಕ ಸಮರದ ಹೆಸರಲ್ಲಿ ಭಾರತ ಮತ್ತು ಅಮೆರಿಕ ನಡುವೆ ಸೃಷ್ಟಿಯಾಗಿರುವ ಉದ್ವಿಗ್ನತೆಯ ಮಂಜು ಕರಗುವಂತೆ ಮಾಡತೊಡಗಿದೆ.
ಭಾರತ ಮತ್ತು ಅಮೆರಿಕ ನಡುವೆ ವಿಶೇಷ ಬಾಂಧವ್ಯವಿದೆ. ಆದ್ದರಿಂದ ನಾವು ತಲೆಕೆಡಿಸಬೇಕಾಗಿಲ್ಲ. ಉಭಯ ದೇಶಗಳ ವಿಶೇಷ ಸಂಬಂಧ ಎಂದೂ ಅಚಲವಾಗಿ ಉಳಿಯಲಿದೆ. ಭಾರತ ಮತ್ತು ಅಮೆರಿಕ ನಡುವೆ ಪ್ರಸ್ತುತ ನೆಲೆಗೊಂಡಿರುವ ಪರಿಸ್ಥಿತಿ ಕೇವಲ ಕ್ಷಣಿಕವಾದುದಾಗಿದೆಯೆಂದು ಅವರು ಹೇಳಿದ್ದಾರೆ.
ಭಾರತ, ಚೀನ ಮತ್ತು ರಷ್ಯಾ ದೇಶಗಳ ಮುಖ್ಯಸ್ಥರು ಇತ್ತೀಚೆಗೆ ಚೀನಾದಲ್ಲಿ ನಡೆದ ಶೃಂಗಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವುದರಿಂದ ವಿಚಲಿತರಾಗಿರುವ ಟ್ರಂಪ್ ಈಗ ತನ್ನ ಹಳೆ ವರಸೆಯನ್ನು ಬದಲಾಯಿಸಿ ಭಾರತದೊಂದಿಗೆ ಮತ್ತೆ ಉತ್ತಮ ಬಾಂಧವ್ಯದ ಹಸ್ತ ಚಾಚತೊಡಗಿದ್ದಾರೆ.