ಮನೆಯೊಡೆಯ ಸ್ವತಃ ಗುಂಡು ಹಾರಿಸಿಕೊಂಡು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಪಿಸ್ತೂಲು ಪೊಲೀಸ್ ವಶಕ್ಕೆ

ಮಂಜೇಶ್ವರ: ವ್ಯಕ್ತಿಯೊಬ್ಬರು ಸ್ವತಃ ಎದೆಗೆ ಗುಂಡಿಕ್ಕಿಕೊಂಡು ಸಾವಿಗೀಡಾದ ಘಟನೆ ನಡೆದಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವು ಮದಂಗಲ್ಲು ನಿವಾಸಿ ಸುಬ್ಬಣ್ಣ ಭಟ್ (86) ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ೨ ಗಂಟೆಗೆ ನಾಡನ್ನು ಬೆಚ್ಚಿ ಬೀಳಿಸಿದ ಈ ದಾರುಣ ಘಟನೆ ನಡೆದಿದೆ.

ನಿನ್ನೆ ಮಧ್ಯಾಹ್ನ ಊಟದ ಬಳಿಕ  ಮಾತ್ರೆ ಸೇವಿಸಲು ನೀರು ತರುವಂತೆ ಸುಬ್ಬಣ್ಣ ಭಟ್ ಪತ್ನಿ ರಾಜಮ್ಮಾಳ್‌ರಲ್ಲಿ ತಿಳಿಸಿದ್ದರೆನ್ನಲಾಗಿದೆ. ಇದರಂತೆ  ಪತ್ನಿ ನೀರು ತರಲು ಅಡುಗೆ ಕೋಣೆಗೆ ಹೋದ ಸಂದರ್ಭದಲ್ಲಿ ಸುಬ್ಬಣ್ಣ ಭಟ್ ಇದ್ದ ಬೆಡ್‌ರೂನಿಂದ ಭಾರೀ ಶಬ್ದ ಕೇಳಿಸಿದೆ. ಕೂಡಲೇ ಪತ್ನಿ ಅಲ್ಲಿಗೆ ತೆರಳಿ ನೋಡಿದಾಗ  ಪತಿ ಮಂಚದಲ್ಲಿ ಬಿದ್ದಿದ್ದು ಎದೆಯಿಂದ ರಕ್ತ ಹರಿಯುತ್ತಿತ್ತು. ಸಮೀಪದಲ್ಲೇ ಪಿಸ್ತೂಲು ಬಿದ್ದಿರುವುದು ಕಂಡುಬಂದಿದೆ. ಈ ಬಗ್ಗೆ ಅವರು ನೀಡಿದ ಮಾಹಿತಿಯಂತೆ  ಸ್ಥಳೀಯರು ಹಾಗೂ ಮಂಜೇಶ್ವರ ಪೊಲೀಸರು ತಲುಪಿ ಪರಿಶೀಲಿಸಿದಾಗ ಸುಬ್ಬಣ್ಣ ಭಟ್ ಸ್ವತಃ ಎದೆಗೆ ಗುಂಡು ಹಾರಿಸಿಕೊಂಡು ಸಾವಿಗೀಡಾಗಿ ದ್ದಾರೆಂದು ತಿಳಿದುಬಂದಿದೆ.

ಮಂಜೇಶ್ವರ ಇನ್‌ಸ್ಪೆಕ್ಟರ್ ಅನೂಪ್ ಕುಮಾರ್ ಹಾಗೂ ಕಾಸರಗೋಡು ಎಎಸ್‌ಪಿ ಸ್ಥಳಕ್ಕೆ ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂನ ಮೆಡಿಕಲ್ ಕಾಲೇಜು ಆಸತ್ರೆಗೆ ಕೊಂಡೊಯ್ಯಲಾಗಿದೆ. ಮರಣೋ ತ್ತರ ಪರೀಕ್ಷೆ ಇಂದು ನಡೆಯಲಿದೆ.

  ಮನೆಯಲ್ಲಿ ಸುಬ್ಬಣ್ಣ ಭಟ್ ಹಾಗೂ ಪತ್ನಿ ರಾಜಮ್ಮಾಳ್ ಮಾತ್ರವೇ ವಾಸಿಸುತ್ತಿದ್ದಾರೆ. ಸುಬ್ಬಣ್ಣ ಭಟ್ ದೀರ್ಘಕಾಲದಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆನ್ನಲಾಗಿದೆ. ಅಸೌಖ್ಯ ವಾಸಿಯಾಗದುದರಿಂದ ಮನನೊಂದು ಇವರು ಸ್ವತಃ  ಗುಂಡು ಹಾರಿಸಿಕೊಂಡು ಸಾವಿಗೀಡಾಗಿ ರಬಹುದೆಂದು ಅಂದಾಜಿಸಲಾಗಿದೆ.  ಕೊಠಡಿಯೊಳಗೆ ಪತ್ತೆಯಾದ ಪಿಸ್ತೂಲನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.

ಮೃತರು ಪತ್ನಿ, ಸಹೋದರರಾದ ಸದಾಶಿವ ಭಟ್, ಆನಂದ ಭಟ್, ಅಶೋಕ ಭಟ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಶ್ರೀನಿವಾಸ ರಾವ್ ಈ ಹಿಂದೆ ನಿಧನಹೊಂದಿದ್ದಾರೆ.

ಸುಬ್ಬಣ್ಣ ಭಟ್‌ರ ಪತ್ನಿ ರಾಜಮ್ಮಾಳ್ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ದಾದಿಯಾಗಿ  ಸೇವೆ ಸಲ್ಲಿಸಿ ನಿವೃತ್ತಿಹೊಂದಿದ್ದಾರೆ. ಕೆಎಸ್‌ಎಸ್‌ಪಿಯು ಜಿಲ್ಲಾ ಮಾಜಿ ಉಪಾಧ್ಯಕ್ಷೆಯೂ ಆಗಿದ್ದಾರೆ.

ಮೃತರ ಮನೆಗೆ ಕೆಎಸ್‌ಎಸ್‌ಪಿ ಯು ಜಿಲ್ಲಾ ಪದಾಧಿಕಾರಿಗಳಾದ ರವಿಚಂದ್ರ ಉದ್ಯಾವರ,ಶೀನಪ್ಪ ಪೂಜಾರಿ ಅಲಾರ್, ಬ್ಲೋಕ್ ಪಂಚಾಯತ್ ಸದಸ್ಯ ಕೆ.ವಿ. ರಾಧಾಕೃಷ್ಣ ಭಟ್ ಹಾಗೂ ವಿವಿಧ ರಾಜಕೀಯ ನೇತಾರರು ಭೇಟಿ ನೀಡಿ ಸಂತಾಪ ಸೂಚಿಸಿದರು.

You cannot copy contents of this page