ಕಾಸರಗೋಡು: ಗಾಜು ಮತ್ತು ಪ್ಲಾಸ್ಟಿಕ್ ಬಾಟಲಿಗಳ ಹೊರತಾಗಿ ಬಿವರೇಜ್ ಕಾರ್ಪರೇಶನ್‌ನ ಮದ ಇನ್ನು ಟೆಟ್ರಾ ಪ್ಯಾಕೆಟ್‌ನಲ್ಲೂ ಲಭಿಸಲಿದೆ. ಪ್ಲಾಸ್ಟಿಕ್ ಉಪಯೋಗವನ್ನು ಗರಿಷ್ಠ ಪ್ರಮಾಣದಲ್ಲಿ ಇಳಿಸುವ ಉದ್ದೇಶದಿಂದ ಬಿವರೇಜ್ ಕಾರ್ಪರೇಶನ್ ಈ ತೀರ್ಮಾನಕ್ಕೆ ಬಂದಿದೆ. ಇದರಂತೆ 375 ಮಿಲ್ಲಿ ಲೀಟರ್ ಮದ್ಯ ಇನ್ನು ಟೆಟ್ರಾ ಪ್ಯಾಕ್‌ನಲ್ಲಿ ನಮ್ಮದೇ ಆದ ಬ್ರಾಂಡ್‌ನಲ್ಲಿ ಮಾರುಕಟ್ಟೆಗಿಳಿಸಲಾಗು ವುದೆಂದು ಬಿವರೇಜ್ ಕಾರ್ಪರೇಶನ್ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಟೆಟ್ರಾ ಪ್ಯಾಕೆಟ್ ನಿರ್ಮಿಸಲು 17 ಕೋಟಿ ರೂ. ವೆಚ್ಚದಲ್ಲಿ ಸ್ಥಾವರ ನಿರ್ಮಿಸಲಾಗುವುದು. ಆದರೆ ಈ ಯೋಜನೆಗೆ ಅಬಕಾರಿ ಇಲಾಖೆಯ ಅನುಮತಿ ಅಗತ್ಯವಿದೆ. ಇದಕ್ಕಾಗಿ ಬಾಟಲಿಗೆ ಸಂಬಂಧಿಸಿದ ನಿಬಂಧನೆಗಳಲ್ಲಿ ಕೆಲವೊಂದು ತಿದ್ದುಪಡಿ ತರಬೇಕಾಗಿ ಬರಲಿದೆ. ಇದಕ್ಕೆ ಬಿವರೇಜ್ ಕಾರ್ಪರೇಶನ್‌ಗೆ ಅನುಮತಿ ಲಭಿಸಿದ್ದಲ್ಲಿ ಇಂತಹ ಮದ್ಯಗಳು ಇನ್ನು ಟೆಟ್ರಾ ಪ್ಯಾಕೆಟ್‌ನಲ್ಲಿ ಲಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿವರೇಜ್ ಕಾರ್ಪರೇಶನ್‌ನ ಜವಾನ್ ಎಂಬ ಸ್ವಂತ ಬ್ರಾಂಡ್‌ನಲ್ಲಿ 750 ಎಂಎಲ್ ಮತ್ತು 1000 ಎಂಎಲ್‌ನ ಮದ್ಯ ಮಾರಾಟ ಮಾಡುವ ತೀರ್ಮಾನವನ್ನೂ ಕಾರ್ಪರೇಶನ್ ಕೈಗೊಂಡಿದೆ.
