ರಸ್ತೆ ಶೋಚನೀಯ: ದುರಸ್ತಿಗೆ ಕ್ರಮವಿಲ್ಲ; ಕಾಸರಗೋಡು-ಉಕ್ಕಿನಡ್ಕ, ಪೈಕ-ಮುಳ್ಳೇರಿಯ ರೂಟ್‌ಗಳಲ್ಲಿ 29ರಿಂದ ಅನಿರ್ಧಿಷ್ಟಾವಧಿ ಬಸ್ ಮುಷ್ಕರ

ಬದಿಯಡ್ಕ: ಕಾಸರಗೋಡು-ಚೆರ್ಕಳ-ನೆಲ್ಲಿಕಟ್ಟೆ-ಬದಿಯಡ್ಕ-ಪೆರ್ಲ ರಸ್ತೆಯಲ್ಲಿ ಹಾಗೂ ಪೈಕ-ಮುಳ್ಳೇರಿಯ ರಸ್ತೆಯ ಶೋಚನೀಯಾ ವಸ್ಥೆಯನ್ನು ಪ್ರತಿಭಟಿಸಿ ಈ ಎರಡು ರೂಟ್‌ಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಈ ಎರಡು ರೂಟ್‌ಗಳಲ್ಲಿ ರಸ್ತೆಯ ವಿವಿಧೆಡೆ ಹೊಂಡಗಳು ಸೃಷ್ಟಿಯಾಗಿದ್ದು, ಬಸ್ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಗಳನ್ನು ದುರಸ್ತಿಗೊಳಿಸದಿದ್ದಲ್ಲಿ ಈ ತಿಂಗಳ 29ರಿಂದ  ಅನಿರ್ಧಿಷ್ಟಾವಧಿ ಬಸ್ ಸಂಚಾರ ಮೊಟಕುಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಫ್ರೈಡ್ ಬಸ್ ಕಾರ್ಮಿಕರ ಯೂನಿಯನ್ ಬದಿಯಡ್ಕ ವಲಯ ಅಧ್ಯಕ್ಷ ಹಾರಿಸ್ ಬದಿಯಡ್ಕ ತಿಳಿಸಿದ್ದಾರೆ.

ಉಕ್ಕಿನಡ್ಕದಲ್ಲಿರುವ ಕಾಸರಗೋಡು ಮೆಡಿಕಲ್ ಕಾಲೇಜು ಶೀಘ್ರ ಆರಂಭಗೊಳ್ಳಲಿರುವಂತೆಯೇ ಕಾಸರಗೋಡಿನಿಂದ ಪೆರ್ಲಕ್ಕೆ ಸಾಗುವ  ಅಂತಾರಾಜ್ಯ ರಸ್ತೆ ಶೋಚನೀಯಾ ವಸ್ಥೆಯಲ್ಲಿರುವ ಬಗ್ಗೆ ಜಿಲ್ಲಾಧಿಕಾರಿ, ಶಾಸಕ ಎನ್.ಎ. ನೆಲ್ಲಿಕುನ್ನು, ಪಿಡಬ್ಲ್ಯುಡಿ, ಕಿಫಿಬಿ, ಆರ್ ಟಿಒ ಮೊದಲಾದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ರಸ್ತೆಯಲ್ಲಿರುವ ಬೃಹತ್ ಹೊಂಡಗಳಿಗೆ ದ್ವಿಚಕ್ರವಾಹನಗಳು ಬಿದ್ದು ಪದೇ ಪದೇ ಅಪಘಾತವುಂಟಾಗುತ್ತಿದೆ. ಈಗಾಗಲೇ ಅಪಘಾತದಿಂದ ಹಲವು ಮಂದಿ ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಹಿತ  ಭಾರೀ ಸಂಖ್ಯೆಯ ಪ್ರಯಾಣಿಕರು ಸಂಚರಿಸುವ ಖಾಸಗಿ ಬಸ್‌ಗಳು ಅಪಘಾತಕ್ಕೀಡಾಗದಿರಲು ನೌಕರರು ಭಾರೀ ಗಮನಹರಿಸಬೇಕಾಗಿ ಬರುತ್ತಿದೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ರಸ್ತೆ ದುರಸ್ತಿಗೆ ಕ್ರಮ ಉಂಟಾಗಿಲ್ಲ. ಇದನ್ನು ಪ್ರತಿಭಟಿಸಿ ಈ ರೂಟ್‌ಗಳಲ್ಲಿ ಖಾಸಗಿ ಬಸ್ ಸಂಚಾರ ಮೊಟಕುಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿ ರುವುದಾಗಿ ಹಾರಿಸ್ ತಿಳಿಸಿದ್ದಾರೆ.

You cannot copy contents of this page