ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ

ಕಾಸರಗೋಡು: ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಪೆರಿಯ ಬಜಾರ್‌ನಲ್ಲಿರುವ ಕಾರು ಶೋರೂಮ್ ಸಿಬ್ಬಂದಿ ಕೋಡೋಂ ಗ್ರಾಮದ ಕರಿಯಂವಳಪ್ಪಿನ ನಿವಾಸಿ ಸಜಿತ್ ಲಾಲ್ (26) ಎಂಬಾತನ ಮೃತದೇಹ ನಿನ್ನೆ ಆಯಂಕಡವು ಸಮೀಪದ ಬಂಗಾಡ್ ಹೊಳೆಯಲ್ಲಿ ಮರದ ಎಡೆಗೆ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾನು ದುಡಿಯುತ್ತಿರುವ  ಶೋರೂಮ್ ನಲ್ಲಿ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಮನೆಯವರಲ್ಲಿ ತಿಳಿಸಿ ಸಜಿತ್‌ಲಾಲ್ ಸೆ.೪ರಂದು ಮನೆಯಿಂದ ಹೊರಗೆ ಹೋಗಿದ್ದನು. ನಂತರ ಮನೆಗೆ ಹಿಂತಿರುಗಿರಲಿಲ್ಲ. ಈ ಮಧ್ಯೆ ಆತ ಚಲಾಯಿಸುತ್ತಿದ್ದ ಬೈಕ್, ಹೆಲ್ಮೆಟ್ ಮತ್ತು ಚಪ್ಪಲಿ ಆಯಂಕಡವು ಸೇತುವೆ ಬಳಿ ಮರುದಿನ ಪತ್ತೆಯಾಗಿತ್ತು. ಇದರಿಂದ ಶಂಕೆಗೊಂಡ ಬೇಕಲ ಪೊಲೀಸರು ಅಗ್ನಿಶಾಮಕದಳದ ಸಹಾಯದೊಂದಿಗೆ ಹೊಳೆಯಲ್ಲಿ ವ್ಯಾಪಕ ಶೋಧ ನಡೆಸಿದರೂ ಸಜಿತ್‌ಲಾಲ್‌ನನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ನಿನ್ನೆ ಆತನ ಮೃತದೇಹ ಬಾಂಗಾಡ್ ಹೊಳೆ ಬದಿಯ ಮರದ ನಡುವೆ ಸಿಲುಕಿಕೊಂಡ ಸ್ಥಿತಿಯಲ್ಲಿ  ಪತ್ತೆಯಾಗಿದೆ. ಬೇಕಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

ಕೆ. ಬಾಲಕೃಷ್ಣನ್- ವಿನೋದಿನಿ ದಂಪತಿ ಪುತ್ರನಾಗಿರುವ ಮೃತರು ಅವರ ಹೊರತಾಗಿ ಸಹೋದರಿಯರಾದ ಸಜಿನ, ಸನಿಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page