ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ವಂಚನೆ: ಇ.ಡಿ ಪ್ರಕರಣದಲ್ಲಿ ಮಾಜಿ ಶಾಸಕ ಖಮರುದ್ದೀನ್ ಸಹಿತ ಇಬ್ಬರಿಗೆ ಜಾಮೀನು ಮಂಜೂರು

ಕಾಸರಗೋಡು: ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಮಂಜೇಶ್ವರದ ಮಾಜಿ ಶಾಸಕ ಎಂ.ಸಿ. ಖಮರುದ್ದೀನ್ ಮತ್ತು ಟಿ.ಪಿ. ಪೂಕೋಯ ತಂಙಳ್ ರಿಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. 50,000 ರೂ.ಗಳ ಬಾಂಡ್ ಹಾಗೂ ತಲಾ ಇಬ್ಬರ  ಜಾಮೀನಿನ ಮೇಲೆ  ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಬೆಚ್ಚು ಕುರ‍್ಯನ್ ಈ ಇಬ್ಬರಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳು ಕಳೆದ ೨೬೫ ದಿನಗಳಿಂದ ನ್ಯಾಯಾಂಗ ಬಂಧನದಲ್ಲಿ ಕಳೆಯುತ್ತಿದ್ದಾರೆ. ಮಾತ್ರವಲ್ಲ ಈ ಪ್ರಕರಣದ ವಿಚಾರಣೆ ಸದ್ಯ ಆರಂಭಗೊಳ್ಳುವ ಸಾಧ್ಯತೆಯೂ ಇಲ್ಲ. ಮಾತ್ರವಲ್ಲ ಈ ಇಬ್ಬರು ಆರೋಪಿಗಳು ಇತರ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ಇ.ಡಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರನ್ನು ಕಳೆದ ಎಪ್ರಿಲ್ 7ರಂದು ಇ.ಡಿ ಬಂಧಿಸಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರು ಅಂದಿನಿಂದ 155 ದಿನಗಳಿಂದ ಕಸ್ಟಡಿಯಲ್ಲಿದ್ದಾರೆ. ಜ್ಯುವೆಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ  ಕ್ರೈಂ ಬ್ರಾಂಚ್ ವಿಭಾಗ ಈ ಇಬ್ಬರನ್ನು ಬಂಧಿಸಿತ್ತು. ಬಳಿಕ  ಅವರು 110 ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿದ್ದರು. ಇ.ಡಿ ಪ್ರಕರಣದಲ್ಲ್ಲಿ ಈ ಇಬ್ಬರು 5 ಮತ್ತು 6ನೇ ಆರೋಪಿಗಳಾಗಿದ್ದಾರೆ. ಇದನ್ನೆಲ್ಲಾ ಪರಿಶೀಲಿಸಿ ಈ ಇಬ್ಬರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

You cannot copy contents of this page