ಉಪ್ಪಳ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನ ಅನಧಿಕೃತ ನಿಲುಗಡೆ: ಬಸ್‌ಗಳಿಗೆ, ವ್ಯಾಪಾರಿಗಳಿಗೆ ಸಮಸ್ಯೆ

ಉಪ್ಪಳ: ಉಪ್ಪಳ ಬಸ್ ನಿಲ್ದಾಣಕ್ಕೆ ಖಾಸಗಿ ವಾಹನಗಳು ಪ್ರವೇಶಿಸುತ್ತಿರುವುದು ವಿವಿಧ ಸಮಸ್ಯೆಗಳನ್ನು ಉಂಟು ಮಾಡುತ್ತಿರುವುದಾಗಿ ವ್ಯಾಪಾರಿಗಳು ಹಾಗೂ ಪ್ರಯಾಣಿಕರು ದೂರಿದ್ದಾರೆ. ಪಂಚಾಯತ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಉಂಟಾಗಿಲ್ಲವೆಂದು ದೂರಲಾಗಿದೆ. ಬಸ್ ನಿಲ್ದಾಣಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದ್ದರೂ, ಅದನ್ನು ಉಲ್ಲಂಘಿಸಿ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿದೆ. ವ್ಯಾಪಾರಕ್ಕಾಗಿ ಬರುವ ವ್ಯಕ್ತಿಗಳು ತಮ್ಮ ವಾಹನಗಳನ್ನು ಬಸ್ ನಿಲ್ದಾಣದೊಳಗೆ ಯದ್ವಾತದ್ವ ತಂದು ನಿಲ್ಲಿಸುವುದರಿಂದಾಗಿ ಬಸ್‌ಗಳಿಗೆ ನಿಲ್ದಾಣ ಪ್ರವೇಶಿಸಲು ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಬಸ್‌ಗಳು ನಿಲ್ದಾಣ ಪ್ರವೇಶಿಸದೆ ಸಂಚರಿಸುತ್ತಿರುವುದಾಗಿಯೂ ಸ್ಥಳೀಯರು ದೂರಿದ್ದಾರೆ. ಇಕ್ಕಟ್ಟಾದ ಬಸ್ ನಿಲ್ದಾಣದೊಳಗೆ ಖಾಸಗಿ ವಾಹನಗಳ ನಿಲುಗಡೆಯೂ ಆದಾಗ ಬಸ್‌ಗಳಿಗೆ ನಿಲುಗಡೆಗೊಳಿಸಲು ಸ್ಥಳ ಇಲ್ಲದಂತಾಗಿದೆ. ಬಸ್‌ಗಳು ನಿಲ್ದಾಣ ಪ್ರವೇಶಿಸದ ಹಿನ್ನೆಯಲ್ಲಿ ಜನರು ನಿಲ್ದಾಣಕ್ಕೆ  ತಲುಪದೆ ಇರುವುದರಿಂದ ಇಲ್ಲಿರುವ ಅಂಗಡಿಗಳಿಗೆ ವ್ಯಾಪಾರ ಕಡಿಮೆಯಾಗುತ್ತಿದೆಯೆಂದು ವ್ಯಾಪಾರಿಗಳು ದೂರಿದ್ದಾರೆ. ಇದರಿಂದಾಗಿ ಬಾಡಿಗೆ ನೀಡಲು ಕೂಡ ಸಾಧ್ಯವಾಗದ ಸ್ಥಿತಿಯಿದೆಯೆಂದು ಅವರು ತಿಳಿಸಿದ್ದಾರೆ. ಖಾಸಗಿ ವಾಹನಗಳ ನಿಲುಗಡೆಯನ್ನು ಹೊರತುಪಡಿಸಿ ಎಲ್ಲಾ ಬಸ್‌ಗಳು ನಿಲ್ದಾಣದೊಳಗೆ ಸುಗಮವಾಗಿ ಸಂಚರಿಸುವಂತೆ ಮಾಡಬೇಕೆಂದು ಹಾಗೂ ಇದಕ್ಕೆ ಅಧಿಕಾರಿಗಳು ಮುತುವರ್ಜಿ ವಹಿಸಿ ಕ್ರಮಕೈಗೊಳ್ಳಬೇಕೆಂದು ವ್ಯಾಪಾರಿಗಳು, ಪ್ರಯಾಣಿಕರು, ಬಸ್ ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.

You cannot copy contents of this page