ಕುಂಬಳೆ: ಕುಂಬಳೆ ಪೇಟೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಿ ಕಾಡುತ್ತಿದ್ದ ಮರಗಳ ರೆಂಬೆಗಳನ್ನು ಕೆಎಸ್‌ಇಬಿ ಅಧಿಕಾರಿಗಳು ಕಡಿದು ತೆಗೆದಿದ್ದಾರೆ.
ಕುಂಬಳೆ ಪೇಟೆಯಲ್ಲಿ ಬದಿಯಡ್ಕ ಭಾಗಕ್ಕೆ ತೆರಳುವ ರಸ್ತೆ ಬದಿ ಆಟೋ ರಿಕ್ಷಾ ನಿಲ್ದಾಣ ಸಮೀಪವಿದ್ದ ಮರಗಳ ರೆಂಬೆಗಳನ್ನು ಕಡಿದು ತೆಗೆಯಲಾಯಿತು. ಈ ಮರಗಳು ಎತ್ತರಕ್ಕೆ ಬೆಳೆದು ಅದರ ರೆಂಬೆಗಳು ವಿದ್ಯುತ್ ತಂತಿಗಳಿಗೆ ಸ್ಪರ್ಶಿಸುತ್ತಿದ್ದವು. ಈ ಮರದಡಿಯಲ್ಲಿ ಕಾಲುದಾರಿಯಲ್ಲೇ ಶಾಲಾ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ನಡೆದು ಹೋಗುತ್ತಿದ್ದರು. ಮರದ ರೆಂಬೆಗಳು ವಿದ್ಯುತ್ ತಂತಿಗೆ ಸ್ಪರ್ಶಿಸುವ ವೇಳೆ ಅದರ ಕೆಳಗೆ ನಡೆದು ಹೋಗುವವರಿಗೆ ಶಾಕ್ ತಗಲುವ ಸಾಧ್ಯತೆ ಇದೆಯೆಂದು ಇದರಿಂದ ಮರದ ರೆಂಬೆಗಳನ್ನು ಕಡಿದು ತೆಗೆಯಬೇಕೆಂದು ಸಾರ್ವಜನಿಕರಿಂದ ಬೇಡಿಕೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಅಲ್ಲಿಗೆ ತಲುಪಿದ ಕೆಎಸ್‌ಇಬಿ ಅಧಿಕಾರಿಗಳು ರೆಂಬೆಗಳನ್ನು ಕಡಿದು ತೆರವುಗೊಳಿಸಿದ್ದಾರೆ.
ಇದೇ ವೇಳೆ ಮರಗಳ ರೆಂಬೆಗಳನ್ನು ಕಡಿದು ತೆರವುಗೊಳಿಸಿದ ಪರಿಣಾಮ ಆ ಮರಗಳಲ್ಲಿ ಗೂಡು ಕಟ್ಟಿ ಜೀವಿಸುತ್ತಿದ್ದ ಹಕ್ಕಿಗಳಿಗೆ ವಾಸಸ್ಥಳವಿಲ್ಲದಂತಾಗಿದೆ. ರೆಂಬೆ ಕಡಿಯುವ ವೇಳೆ ಮರಗಳಲ್ಲಿ ಹಕ್ಕಿಗಳ ಗೂಡು ಪತ್ತೆಯಾಗಿದೆ. ಅದರಲ್ಲಿದ್ದ ಹಕ್ಕಿಗಳು ಹಾರಿಹೋಗಿದ್ದು, ಗೂಡಿನಲ್ಲಿ ಒಂದು ಮರಿ ಹಕ್ಕಿ ಉಳಿದುಕೊಂಡಿದೆ. ಇದನ್ನು ಸಾಕಲು ಆಸಕ್ತಿಯುಳ್ಳವರಿಗೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.