ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪ ಅಳವಡಿಸುತ್ತಿದ್ದ ವೇಳೆ ಕ್ರೇನ್‌ನ ಬಕೆಟ್ ತುಂಡಾಗಿ ಬಿದ್ದು ಇಬ್ಬರು ಕಾರ್ಮಿಕರ ಸಾವು: 8 ತಿಂಗಳಲ್ಲಿ ಜಿಲ್ಲೆಯಲ್ಲಿ  ಪ್ರಾಣ ಕಳೆದುಕೊಂಡದ್ದು 25 ಕಾರ್ಮಿಕರು

ಕಾಸರಗೋಡು:  ನವೀಕರಿಸಿದ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ದಾರಿದೀಪ ಅಳವಡಿಸುತ್ತಿದ್ದ ವೇಳೆ ಕ್ರೇನ್‌ನ ಬಕೆಟ್ ತುಂಡಾಗಿಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ದಾರುಣ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.  ಊರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ ಆಪರೇಟಿವ್ ಸೊಸೈಟಿಯ ವಿದ್ಯುತ್ ವಿಭಾಗದ ಕಾರ್ಮಿಕರಾದ ವಡಗರೆ ಮಣಿಯೂರು ನಿವಾಸಿ ಅಶ್ವಿನ್ (27) ಮತ್ತು ಮಾಡಾಪಳ್ಳಿಯ ಅಕ್ಷಯ್ (25) ಎಂಬವರು  ಸಾವನ್ನಪ್ಪಿದ ದುರ್ದೈವಿಗಳು.

 ನಿನ್ನೆ ಮಧ್ಯಾಹ್ನ 12.30ರ ವೇಳೆ ಈ ದುರ್ಘಟನೆ ನಡೆದಿದೆ. ತಲಪ್ಪಾಡಿಯಿಂದ ಚೆಂಗಳ ತನಕದ ಪ್ರಥಮ ರೀಚ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ  ದಾರಿದೀಪ ಅಳವಡಿಕೆ ಕೆಲಸ ಬಹುತೇಕ ಈಗಾಗಲೇ ಪೂರ್ಣಗೊಂಡಿದೆ. ಈಪೈಕಿ ಮೊಗ್ರಾಲ್ ಪುತ್ತೂರಿನಲ್ಲಿ ಉರಿಯದ ದಾರಿದೀಪಗಳನ್ನು  ಕಳಚಿ ನವೀಕರಿಸಲೆಂದು ಈ ಇಬ್ಬರು ಕಾರ್ಮಿಕರು ನಿನ್ನೆ ಕ್ರೇನ್‌ನ ಬಕೆಟ್‌ನಲ್ಲಿ  ಮೇಲೇರಿ ನಿಂತು ಸರಿಯಾಗಿ ಕಾರ್ಯವೆಸಗದ ಬಲ್ಬುಗಳನ್ನು ತೆಗೆದು ಹೊಸ ಬಲ್ಬುಗಳನ್ನು ಅಳವಡಿಸುವ ಕೆಲಸದಲ್ಲಿ ನಿರತರಾಗಿದ್ದ ವೇಳೆ ಕ್ರೇನ್‌ನ ಬಕೆಟ್ ತುಂಡಾಗಿ ಕೆಳಗೆ ಬಿದ್ದಿದೆ. ಗಂಭೀರಗಾಯಗೊಂಡ ಇವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.  ಮೃತರ ಪೈಕಿ  ಅಕ್ಷಯ್ ಕಳೆದ ಮೂರು ವರ್ಷಗಳಿಂದ ಊರಾಳುಂಗಲ್ ಸೊಸೈಟಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದನು.  ಈತ ವಡಗರೆ ನಾದಾಪುರ ರಸ್ತೆಯ ಮಾಡಪ್ಪಳ್ಳಿ ಶಾಲೆ ಬಳಿಯ ರಾಜೇಂದ್ರನ್-ಸತಿ ದಂಪತಿಯ ಏಕ ಪುತ್ರನಾಗಿದ್ದಾನೆ.

ಅಶ್ವಿನ್ ಮಣಿಯೂರು ಪದಿಯಾಕರೆಯ ಕೊಟ್ಟಿಟ್ಟಯಿಲ್‌ನ ಬಾಬು-ಸಜಿತ ದಂಪತಿಯ ಪುತ್ರನಾಗಿದ್ದಾನೆ. ಈತ ಸಹೋದರ ಅಭಿಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

ಜಿಲ್ಲೆಯಲ್ಲಿ ಕಳೆದ 8 ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದ ವೇಳೆ ಉಂಟಾದ ಅವಘಡದಲ್ಲಿ ಒಟ್ಟು 25 ಮಂದಿ ಸಾವನ್ನಪ್ಪಿದ್ದಾರೆ. 2025 ಜನವರಿಯಿಂದ ಒಟ್ಟು 119 ಅವಘಡಗಳು ಜಿಲ್ಲೆಯಲ್ಲ್ಲಿ ನಡೆದಿವೆ. ಇದರಲ್ಲಿ 61 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

RELATED NEWS

You cannot copy contents of this page