ಕಾಸರಗೋಡು: ಪುಲ್ಲೂರು ನಿವಾಸಿ ಹಾಗೂ ಗಲ್ಫ್ ಉದ್ಯೋಗಿ ಯಾಗಿರುವ ಪದ್ಮರಾಜನ್ ಎಂಬವರ ಮನೆಯಲ್ಲಿ ಅಗೋಸ್ತ್ ೨೫ರಂದು ರಾತ್ರಿ ಕಳವಿಗೆತ್ನಿಸಿದ ಪ್ರಕರಣದ ಇಬ್ಬರನ್ನು ಕಾಸರಗೋಡು ಎಎಸ್‌ಪಿ ನಂದಗೋಪನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಹಲವು ಕಳವು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಕರ್ನಾಟಕ ಗಡಿಯ ಮುರತ್ತಣೆ ನಿವಾಸಿ ಶಿಹಾಬ್ (38) ಮತ್ತು ದೇರಳಕಟ್ಟೆಯ ಅಬ್ದುಲ್ ಮುದಾಸೀರ್ (28) ಬಂಧಿತ ಆರೋಪಿಗಳು. ಪದ್ಮನಾಭನ್‌ರ ಮನೆಗೆ ರಾತ್ರಿ ಈ ಇಬ್ಬರು ಆರೋಪಿಗಳು ನುಗ್ಗಿ ಬಾಗಿಲನ್ನು ಒಡೆಯುತ್ತಿದ್ದ ವೇಳೆ ಸದ್ದುಕೇಳಿ ಪದ್ಮನಾಭನ್‌ರ ಪತ್ನಿ ಸೌದಾಮಿನಿ ಎಚ್ಚೆತ್ತು ನೋಡಿದಾಗ ಆರೋಪಿಗಳು ಮನೆಯ ಮೇಲಿನ ಅಂತಸ್ತಿನಲ್ಲಿರುವುದನ್ನು ಕಂಡು ತಕ್ಷಣ ವಿಷಯವನ್ನು ನೆರೆಮನೆಯವರಿಗೆ ತಿಳಿಸಿದ್ದಾರೆ. ನೆರೆಮನೆಯವರು ಬಂದಾಗ ಆರೋಪಿಗಳಿಬ್ಬರು ಅಲ್ಲಿಂದ ಗೋಡೆ ಹಾರಿ ತಪ್ಪಿಸಿಕೊಂಡಿದ್ದಾರೆ. ಗೋಡೆ ಹಾರುವ ವೇಳೆ ಆರೋಪಿಗಳ ಪೈಕಿ ಮುದಾಸೀರ್ ಬಿದ್ದು ಕಾಲಿನ ಎಲುಬು ಮುರಿದು ಆಸ್ಪತ್ರೆಯಲ್ಲಿ ದಾಖಲುಗೊಂಡು ಚಿಕಿತ್ಸೆ ಪಡೆದಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಅಂಬಲತರ ಪೊಲೀಸರು ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಶಿಹಾಬ್‌ನನ್ನು ಪೊಲೀಸರು ನಿನ್ನೆ ಮುಂಜಾನೆ ಆತನ ಮನೆಯನ್ನು ಸುತ್ತುವರಿದು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ. ಆ ವೇಳೆ ಆತ ಕೈಯಲ್ಲಿ ಮಾರಕಾ ಯುಧ ಹಿಡಿದು ಆತ್ಮಹತ್ಯೆ ಬೆದರಿಕೆಯೊಡ್ಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಇನ್ನೋರ್ವ ಆರೋಪಿ ಮುದಾಸೀರ್‌ನನ್ನು ದೇರಳಕಟ್ಟೆಯ ಆತನ ಮನೆಯಿಂದ ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಬದಿಯಡ್ಕ ಪೊಲೀಸ್ ಠಾಣೆಯ ಎಎಸ್‌ಐ ಪಿ.ಕೆ. ಪ್ರಸಾದ್ ಪುಲ್ಲೂರು, ಸಿಪಿಒ ಮಹಮ್ಮದ್ ಆರೀಫ್ ಆರಿಕ್ಕಾಡಿ, ಕಾಸರಗೋಡು ಪೊಲೀಸ್ ಠಾಣೆಯ ಸೀನಿಯರ್ ಸಿವಿಲ್ ಆಫೀಸರ್ ಪಿ.ಪಿ. ಶೈಜು, ವಿದ್ಯಾನಗರ ಪೊಲೀಸ್ ಠಾಣೆಯ ಸಿಪಿಒ ಬಿ.ಉಣ್ಣಿಕೃಷ್ಣನ್ ಎಂಬವರು ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡದಲ್ಲಿ ಒಳಗೊಂಡಿದ್ದರು.