ಬದಿಯಡ್ಕ: ನೀರ್ಚಾಲು ಸಾಯಿ ಮಂದಿರದಿಂದ ಮುಗು ರಸ್ತೆ, ಪಾಡ್ಲಡ್ಕ – ಬೇಳ ರಸ್ತೆ ಶೋಚನೀಯ ಸ್ಥಿತಿಯಲ್ಲಿದ್ದು, ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದೆ. ೧೭ ವರ್ಷಗಳ ಹಿಂದೆ ಈ ರಸ್ತೆಯನ್ನು ಪಂಚಾಯತ್ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿತ್ತು. ಆ ಬಳಿಕ ಯಾವುದೇ ದುರಸ್ತಿ ಕಾರ್ಯ ನಡೆಯದಿರುವುದೇ ಈಗಿನ ದುಸ್ಥಿತಿಗೆ ಕಾರಣವೆಂದು ಹೇಳಲಾಗುತ್ತಿದೆ. ಎರಡು ವರ್ಷದ ಹಿಂದೆ ತೇಪೆ ಹಚ್ಚಲಾಗಿದ್ದರೂ ಯಾವುದೇ ಪ್ರಯೋಜನ ಉಂಟಾಗಲಿಲ್ಲವೆನ್ನಲಾಗಿದೆ.
ಅಲ್ಲಲ್ಲಿ ಡಾಮರು ಎದ್ದುಹೋಗಿ ಹೊಂಡ ಸೃಷ್ಟಿಯಾಗಿದೆ. ದಿನನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಕಿಳಿಂಗಾರು ಶಾಲೆ, ನೀರ್ಚಾಲು ಶಾಲೆಗೆ ಮಕ್ಕಳು ಈ ರಸ್ತೆ ಮೂಲಕವೇ ನಿತ್ಯವೂ ಸಂಚರಿಸಬೇಕಾಗಿದೆ. ನೀರ್ಚಾಲಿನಿಂದ ಪೈವಳಿಕೆ, ಪೆರ್ಮುದೆ ಭಾಗಕ್ಕೆ ತೆರಳಲು ಇದು ಹತ್ತಿರದ ದಾರಿಯಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ರಸ್ತೆಯನ್ನು ದುರಸ್ತಿಗೊಳಿಸಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.