ಮುಳ್ಳೇರಿಯ: ಹೆಚ್ಚುವರಿ ವರದಕ್ಷಿಣೆಗಾಗಿ ಒತ್ತಾಯಿಸಿರುವುದಲ್ಲದೆ ನೀಡಿರುವ ಚಿನ್ನ ಕಡಿಮೆಯಾಯಿತೆಂಬ ಹೆಸರಲ್ಲಿ ಮೂರು ಬಾರಿ ತಲಾಖ್ ನುಡಿದು ವಿವಾಹ ವಿಚ್ಛೇಧನ ನಡೆಸಿರುವುದಾಗಿ ಆರೋಪವುಂಟಾಗಿದೆ. ಮಂಗಳೂರು ಪಂಪ್‌ವೆಲ್ ನಿವಾಸಿ ಎಂ. ಆಯಿಶತ್ ಮುಸೈನ (25) ಎಂಬಾಕೆ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಯುವತಿಯ ಪತಿ ದೇಲಂಪಾಡಿ ಚಾಮತ್ತಡ್ಕದ ಸಿ. ಅಬ್ದುಲ್ ವಾಜಿದ್ (32),ಈತನ ತಾಯಿ ಮೈಮೂನ (50), ತಂದೆ ಸಿ.ಎ ಮುಹಮ್ಮದ್ ಕುಂಞಿ (50) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. 2018 ನವಂಬರ್ 11ರಂದು ಅಬ್ದುಲ್ ವಾಜಿದ್ ಹಾಗೂ ಆಯಿಶತ್ ಮುಸೈನರ ಮದುವೆ ನಡೆದಿತ್ತು. ಅನಂತರ ಪತಿ ಮನೆಯಲ್ಲಿ ವಾಸಿಸುತ್ತಿದ್ದ ವೇಳೆ ಹೆಚ್ಚುವರಿ ವರದಕ್ಷಿಣೆ ನೀಡಬೇಕೆಂದು ಒತ್ತಾಯಿಸಿ ಯುವತಿಗೆ ಪತಿ ಹಾಗೂ ನೀಡಿರುವ ಚಿನ್ನ ಕಡಿಮೆಯಾಯಿತೆಂದು ತಿಳಿಸಿ ಪತಿಯ ತಂದೆ-ತಾಯಿ ಮಾನಸಿಕವಾಗಿ ಕಿರುಕುಳ ನೀಡಿರುವುದಾಗಿ ಆದೂರು ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಅಗೋಸ್ತ್ 4ರಂದು ರಾತ್ರಿ 7.30ಕ್ಕೆ ದೂರುದಾತೆ ಯುವತಿಯ ಮಂಗಳೂರಿನ ಫ್ಲಾಟ್‌ಗೆ ತಲುಪಿದ ಪತಿ ಅಬ್ದುಲ್ ವಾಜಿದ್ ಮೂರು ಬಾರಿ ತಲಾಖ್ ನುಡಿದು ವಿವಾಹ ಸಂಬಂಧ ವಿಚ್ಛೇಧಿಸಿರುವುದಾಗಿ ಪ್ರಕರಣದಲ್ಲಿ ತಿಳಿಸಲಾಗಿದೆ. ಕೆಲವು ವಾರಗಳ ಹಿಂದೆಯೂ ಆದೂರು ಪೊಲೀಸರು ಮುತ್ತಲಾಖ್ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಸ್ತುತ ಪ್ರಕರಣದ ಆರೋಪಿ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆನ್ನಲಾಗಿದೆ.
