ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರಿಬ್ಬರು ಮೊಗ್ರಾಲ್ ಪುತ್ತೂರು ಬಳಿ ಕ್ರೈನ್‌ನ ಬಕೆಟ್ ತುಂಡಾಗಿ ಕೆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಕಲ್ಲಿಕೋಟೆ ವಲಯ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಆಗ್ರಹಪಟ್ಟಿದ್ದಾರೆ. ನಿರ್ಮಾಣ ಕೆಲಸದಲ್ಲಿ ಕಾರ್ಮಿಕರಿಗೆ ಅಗತ್ಯದ ಸುರಕ್ಷಾ ವ್ಯವಸ್ಥೆ ಏರ್ಪಡಿಸುವಲ್ಲಿ ಗುತ್ತಿಗೆ ಸಂಸ್ಥೆಯ ವತಿಯಿಂದ ನಿರ್ಲಕ್ಷ್ಯ ಉಂಟಾಗಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಮಾತ್ರವಲ್ಲ ನಿರ್ಮಾಣ ಕೆಲಸದ ಮೇಲ್ನೋಟ ವಹಿಸುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವತಿಯಿಂದ ಕಾರ್ಮಿಕರಿಗೆ ಸುರಕ್ಷತೆ ಒದಗಿಸುವ ವಿಷಯದಲ್ಲಿ ಅನಾಸ್ಥೆ ಉಂಟಾಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು. ನಿರ್ಲಕ್ಷ್ಯ ಉಂಟಾಗಿರುವುದು ಸಾಬೀತು ಗೊಂಡಲ್ಲಿ ಗುತ್ತಿಗೆ ಸಂಸ್ಥೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದೂ ಶ್ರೀಕಾಂತ್ ಆಗ್ರಹಪಟ್ಟಿದ್ದಾರೆ.
ಸಿಪಿಎಂ ನಿಯಂತ್ರಣದಲ್ಲಿರುವ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯವನ್ನು ಮರೆಮಾಚಿ ಪೊಲೀಸರು ತನಿಖೆಯನ್ನು ಬುಡಮೇಲುಗೊಳಿಸಲೆತ್ನಿಸಿದ್ದಾರೆಯೇ ಎಂಬ ಶಂಕೆಯನ್ನೂ ಶ್ರೀಕಾಂತ್ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕಾರ್ಮಿಕರಿಬ್ಬರ ಕುಟುಂಬಕ್ಕೆ ಅರ್ಹವಾದ ರೀತಿಯ ನಷ್ಟ ಪರಿಹಾರ ನೀಡಬೇಕೆಂದೂ ಅವರು ಒತ್ತಾಯಿಸಿದ್ದಾರೆ.