ಕುಂಬಳೆ: ಶಾಲಾ ವಿದ್ಯಾರ್ಥಿಗಳಿಗೆ ಹಿಪ್ನೋಟಿಸಂ ಬಗ್ಗೆ ತಿಳಿಸುವುದಾಗಿ ಹೇಳಿ ಇತರ ಕೆಲವು ಹಿರಿಯ ವಿದ್ಯಾರ್ಥಿಗಳು ಗಂಭೀರ ಹಲ್ಲೆಗೈದು ಅವರ ಪ್ರಜ್ಞೆ ತಪ್ಪಿಸಿದ ಘಟನೆ ನಾಡಿನಲ್ಲಿ ಸುದ್ದಿಯಾಗಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಈ ವಿಷಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಶಾಲಾ ಅಧಿಕಾರಿಗಳು, ಅಧ್ಯಾಪಕರು, ಪ್ರಕರಣಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು ಹಾಗೂ ಅವರ ಹೆತ್ತವರನ್ನು ಕುಂಬಳೆ ಪೊಲೀಸರು ಠಾಣೆಗೆ ಕರೆಸಿ ತಾಕೀತು ನೀಡಿದ್ದಾರೆ.
ಮುಟ್ಟಂನಲ್ಲಿರುವ ಖಾಸಗಿ ಖಾಸಗಿ ಶಾಲೆಯೊಂದರಲ್ಲಿ ಇತ್ತೀಚೆಗೆ ಹಿಪ್ನೋಟಿಸಂನ ಹೆಸರಲ್ಲಿ ವಿದ್ಯಾರ್ಥಿಗಳಿಗೆ ಹಲ್ಲೆಗೈದ ಘಟನೆ ನಡೆದಿರುವುದಾಗಿ ದೂರಲಾಗಿದೆ. ಪ್ರಸ್ತುತ ಶಾಲೆಯ ೮ನೇ ತರಗತಿಗೆ ಬಂದ ಮೂವರು ಹಿರಿಯ ವಿದ್ಯಾರ್ಥಿಗಳು ಈ ಕೃತ್ಯ ನಡೆಸಿದ್ದಾರೆನ್ನಲಾಗಿದೆ. ೮ನೇ ತರಗತಿ ವಿದ್ಯಾರ್ಥಿಯೂ ಮಂಗಲ್ಪಾಡಿ ನಯಾ ಬಜಾರ್ ನಿವಾಸಿಯ ಪುತ್ರನ ಸಹಿತ ಅದೇ ತರಗತಿಯ ಇನ್ನೋರ್ವ ವಿದ್ಯಾರ್ಥಿಯ ಕುತ್ತಿಗೆಯ ಹಿಂಭಾಗಕ್ಕೆ ಹಿರಿಯ ವಿದ್ಯಾರ್ಥಿಗಳು ಬಲವಾಗಿ ಹೊಡೆದಿದ್ದಾರೆ.ಹಲ್ಲೆಗೊಂಡ ವಿದ್ಯಾರ್ಥಿ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದು, ಈ ವೇಳೆ ಆತನ ತಲೆಗೆ ಗಂಭೀರ ಗಾಯವುಂಟಾಯಿತು. ಪ್ರಜ್ಞೆ ತಪ್ಪಿದ ವಿದ್ಯಾರ್ಥಿಯ ಮುಖಕ್ಕೆ ಮತ್ತೊಮ್ಮೆ ಹೊಡೆದಿದ್ದು ಈ ವೇಳೆ ವಿದ್ಯಾರ್ಥಿಗೆ ಪ್ರಜ್ಞೆ ಮರಳಿದೆ. ಈ ವೇಳೆ ಹಲ್ಲೆಗೈದ ವಿದ್ಯಾರ್ಥಿಗಳು ಸಂತೋಷದಿಂದ ಗಟ್ಟಿಯಾಗಿ ನಗುತ್ತಾ ನೃತ್ಯಮಾಡತೊಡಗಿದ್ದಾರೆ. ಇದನ್ನರಿತ ಇತರ ವಿದ್ಯಾರ್ಥಿಗಳು ಭಯ ಹಾಗೂ ಆಶ್ಚರ್ಯದಿಂದ ಇದೇನೆಂದು ಪ್ರಶ್ನಿಸಿದಾಗ ಇದು ಹಿಪ್ನೋಟಿಸಂ, ಅಧ್ಯಾಪಕರು ಹೇಳಿಕೊಟ್ಟದ್ದು ಎಂದು ತಿಳಿಸಿ ವಿದ್ಯಾರ್ಥಿಗಳು ಅಲ್ಲಿಂದ ಮರಳಿದ್ದಾರೆನ್ನಲಾಗಿದೆ. ತಲೆ, ಮುಖಕ್ಕೆ ಗಾಯಗೊಂಡ ವಿದ್ಯಾರ್ಥಿಯನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಶಾಲೆಯಲ್ಲಿ ನಡೆದ ಈ ಘಟನೆ ನಾಡಿನಲ್ಲಿ ಸುದ್ದಿಯಾಗುತ್ತಿದ್ದಂತೆ ಮಕ್ಕಳ ಹೆತ್ತವರು ಆತಂಕಕ್ಕೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕುಂಬಳೆ ಪೊಲೀಸರು ಸಂಬಂಧಪಟ್ಟ ಶಾಲಾಧಿಕಾರಿಗಳು, ಅಧ್ಯಾಪಕರು, ಹಲ್ಲೆಗೈದ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರನ್ನು ಠಾಣೆಗೆ ಕರೆಸಿ ಇಂತಹ ಘಟನೆ ಇನ್ನು ಮುಂದೆ ನಡೆಯಕೂಡದೆಂದು ತಾಕೀತು ನೀಡಿದ್ದಾರೆ. ಮಾತ್ರವಲ್ಲದೆ ಇಂತಹ ವಿಷಯಗಳ ಬಗ್ಗೆ ತಿಳಿವಳಿಕಾ ಕಾರ್ಯಕ್ರಮ ನಡೆಸುವಂತೆಯೂ ಆರೋಪಕ್ಕೆಡೆಯಾದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.