ಪೊಲೀಸ್ ಜನಸಾಮಾನ್ಯರ ಯಮನಾಗಿ ಬದಲಾಗುತ್ತಿದೆ- ಕೆ. ರಂಜಿತ್

ಕಾಸರಗೋಡು: ರಾಜ್ಯದ ಪೊಲೀಸ್ ಜನಸಾಮಾನ್ಯರ ಯಮನಾಗಿ ಬದಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಆರೋಪಿಸಿದ್ದಾರೆ. ಪಿಣರಾಯಿ ವಿಜಯನ್ ಆಡಳಿತದ ಪೊಲೀಸ್ ದೌರ್ಜನ್ಯ, ಅನಾಸ್ಥೆ ವಿರುದ್ಧ ಹಾಗೂ ಅಭಿವೃದ್ಧಿ ಕೇರಳಕ್ಕಾಗಿ ಪೊಲೀಸ್ ಸೇನೆಯ ಸಮಗ್ರ ಬದಲಾವಣೆ ಆಗ್ರಹಿಸಿ ಕಾಸರಗೋಡು ಎಸ್‌ಪಿ ಕಚೇರಿಗೆ ಬಿಜೆಪಿ ಜಿಲ್ಲಾ ಸಮಿತಿ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಓರ್ವನನ್ನು ಅಪರಾಧಿಯೋ ಅಥವಾ ನಿರಪರಾಧಿಯೋ ಎಂದು ತೀರ್ಮಾನಿಸುವುದು ಪೊಲೀಸರ ಹಲ್ಲೆ ರೀತಿಗಳನ್ನು ಉಪಯೋಗಿಸಿ ಅಲ್ಲ. ನಿರಪರಾಧಿಗಳು ಆರೋಪವನ್ನು ವಹಿಸಿಕೊಳ್ಳಬೇಕಾದ ಸ್ಥಿತಿ ರಾಜ್ಯ ದಲ್ಲಿದೆ. ಹಲವಾರು ಮಂದಿಯನ್ನು ಪೊಲೀಸರು ಕ್ರೂರವಾಗಿ ಹಲ್ಲೆಗೈದಿದ್ದು ಪೊಲೀಸ್ ಠಾಣೆಯಲ್ಲೇ ಮೃತಪಟ್ಟ ಘಟನೆಯೂ ನಡೆದಿದೆ ಎಂದು ಅವರು ಆರೋಪಿಸಿದರು.

ಕೇರಳದ ಪೊಲೀಸರು ಪಿಣರಾಯಿ ವಿಜಯನ್‌ರ ಗೂಂಡಾಗಳಾಗಿ ಬದಲಾಗಿದ್ದಾರೆಂದು, ಭಯವಿಲ್ಲದೆ ಪೊಲೀಸ್ ಠಾಣೆಗೆ ತೆರಳಲು ಸಾಧ್ಯವಾಗುವುದಿಲ್ಲವೆಂದು ಅವರು ಆರೋಪಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್ ಸ್ವಾಗತಿಸಿ, ಮನುಲಾಲ್ ಮೇಲತ್ ವಂದಿಸಿದರು. ಉದಯಗಿರಿಯಿಂದ ಆರಂಭಗೊಂಡ ಮಾರ್ಚನ್ನು ಜಿಲ್ಲಾ ಉಪಾಧ್ಯಕ್ಷರಾದ ಪಿ. ರಮೇಶ್, ಮಣಿಕಂಠ ರೈ, ಎಂ. ಬಲ್‌ರಾಜ್, ಎಂ. ಜನನಿ, ಮುರಳೀಧರ ಯಾದವ್, ಎಂ. ಭಾಸ್ಕರ್, ಕಾರ್ಯದರ್ಶಿಗಳಾದ ಎನ್. ಮಧು, ಮಹೇಶ್ ಗೋಪಾಲ್, ಪುಷ್ಪಗೋಪಾಲನ್, ಲೋಕೇಶ್ ನೋಂಡ, ಕೆ.ಎಂ. ಅಶ್ವಿನಿ, ಕೆ.ಟಿ. ಪುರುಷೋತ್ತಮನ್, ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಸೆಲ್ ಕೋ-ಆರ್ಡಿನೇಟರ್ ಸುಕುಮಾರ ಕುದ್ರೆಪ್ಪಾಡಿ, ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಎಸ್‌ಟಿ ಮೋರ್ಚಾ ರಾಜ್ಯ ಉಪಧ್ಯಕ್ಷರಾದ ಟಿ.ಡಿ. ಭರತನ್, ಶಿಬೂ ಪಾಣತ್ತೂರು, ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಕೆ.ಎಸ್. ರಮಣಿ, ಕರ್ಷಕ ಮೋರ್ಚಾ ಜಿಲ್ಲಾಧ್ಯಕ್ಷ ಸುಕುಮಾರನ್ ಖಾಲಿಕಡವ್, ಒಬಿಸಿ ಜಿಲ್ಲಾಧ್ಯಕ್ಷ ವಲ್ಸರಾಜ್, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್. ನಾರಾಯಣ ನಾಯ್ಕ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಅಶ್ವಿನ್ ನೇತೃತ್ವ ನೀಡಿದರು.

You cannot copy contents of this page