ಮಂಜೇಶ್ವರ: ಮದುವೆ ಅಗತ್ಯಕ್ಕೆಂದು ತಿಳಿಸಿ ವ್ಯಕ್ತಿಯೊಬ್ಬರಿಂದ ಕಾರು ಖರೀದಿಸಿ ಬಳಿಕ ಹಣ ನೀಡದೆ ವಂಚಿಸಿ ಬೆದರಿಕೆಯೊಡ್ಡಿದ ಆರೋಪದಂತೆ ಐದು ಮಂದಿ ವಿರದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಹೊಸಬೆಟ್ಟು ಕಟ್ಟೆ ಬಜಾರ್ ಪಾಂಡ್ಯಾಲ ನಿವಾಸಿ ಮಜೀದ್ ಎಂಬವರು ನೀಡಿದ ದೂರಿನಂತೆ ಹೊಸಬೆಟ್ಟು ನಿವಾಸಿ ಅಹಮ್ಮದ್ ಝುಹೈಬ್, ಕಾಸರಗೋಡು ಕೂಡ್ಲು ನಿವಾಸಿಗಳಾದ ಅಬ್ದುಲ್ ರಿಸ್ವಾನ್, ಮೊಹಮ್ಮದ್ ಸಿನಾನ್, ಮಧೂರು ನಿವಾಸಿ ಅಶ್ಫಾಕ್ ಹಾಗೂ ಸೀತಾಂಗೋಳಿ ಬಳಿಯ ಮುಗು ನಿವಾಸಿಯಾದ ಓರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ.
ದೂರುಗಾರನಾದ ಪಾಂಡ್ಯಾಲದ ಮಜೀದ್‌ರ ಕಾರನ್ನು ಮದುವೆ ಅಗತ್ಯಕ್ಕೆಂದು ತಿಳಿಸಿ ಐದು ಮಂದಿ ಆರೋಪಿಗಳು ಕಳೆದ 13ರಂದು ಖರೀದಿಸಿದ್ದರೆನ್ನಲಾಗಿದೆ. ಖರೀದಿ ವೇಳೆ ಅಲ್ಪ ಮೊತ್ತವನ್ನು ಮುಂಗಡವಾಗಿ ನೀಡಿದ್ದು, ಬಾಕಿ ಮೊತ್ತವನ್ನು ಬಳಿಕ ನೀಡುವುದಾಗಿ ತಿಳಿಸಲಾಗಿತ್ತೆನ್ನಲಾಗಿದೆ. ಆದರೆ ಅನಂತರ ಹಣ ಲಭಿಸಲಿಲ್ಲ. ಇದರಿಂದ ಮಜೀದ್ ಹಣ ಕೇಳಿದಾಗ ಆರೋಪಿಗಳು ಬೆದರಿಕೆ ಯೊಡ್ಡಿದ್ದರೆಂದು ಮಜೀದ್ ಕಾಸರಗೋಡು ಎಎಸ್‌ಪಿಗೆ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿದ ಎಎಸ್‌ಪಿ ಪ್ರಕರಣ ಕುರಿತು ತನಿಖೆ ನಡೆಸುವಂತೆ ಮಂಜೇಶ್ವರ ಪೊಲೀಸರಿಗೆ ನಿರ್ದೇಶ ನೀಡಿದ್ದರು. ಇದರಂತೆ ಪೊಲೀಸರು ತನಿಖೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.